ನವದೆಹಲಿ: 'ಚೀನಾ ಭಾರತದ ಶತ್ರುವಲ್ಲ' ಎಂಬ ಹೇಳಿಕೆ ನೀಡುವ ಮೂಲಕ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಪಿತ್ರೋಡಾ ಹೇಳಿಕೆಯನ್ನು ಬಿಜೆಪಿ ಬಲವಾಗಿ ಟೀಕಿಸಿದೆ.
ಖಾಸಗಿ ಸುದ್ದಿಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಪಿತ್ರೋಡಾ, ಚೀನಾದ ಬಗ್ಗೆ ಭಾರತ ಹೊಂದಿರುವ ಮನಸ್ಥಿತಿ ಬದಲಾಗಬೇಕಿದೆ ಎಂದಿದ್ದರು.
'ಭಾರತಕ್ಕೆ ಚೀನಾದಿಂದ ಬೆದರಿಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಅಮೆರಿಕವು ತನ್ನ ಶತ್ರು ರಾಷ್ಟ್ರಗಳನ್ನು ವ್ಯಾಖ್ಯಾನಿಸುವ ಪ್ರವೃತ್ತಿಯ ಒಂದು ಅನುಕರಣೆಯಾಗಿದೆ. ಒಗ್ಗಟ್ಟಾಗಿ ಎಲ್ಲಾ ರಾಷ್ಟ್ರಗಳು ಮುಂದುವರಿಯಬೇಕೇ ಹೊರತು ಕಾದಾಡಬಾರದು' ಎಂದು ಹೇಳಿದ್ದರು.
ಪಿತ್ರೋಡಾ ಹೇಳಿಕೆ ಟೀಕಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ತುಹಿನ್ ಸಿನ್ಹಾ, 40 ಸಾವಿರ ಚದರ ಕಿ.ಮೀ ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟವರಿಗೆ ಚೀನಾದಿಂದ ಯಾವುದೇ ಬೆದರಿಕೆ ಕಾಣುವುದಿಲ್ಲ' ಎಂದು ಹೇಳಿದ್ದಾರೆ
ಮತ್ತೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, 'ಪಿತ್ರೋಡಾ ಅವರು ರಾಹುಲ್ ಗಾಂಧಿಯವರ ಆಪ್ತ ಸಹಾಯಕರಾಗಿದ್ದಾರೆ. ಕಾಂಗ್ರೆಸ್ ಭಾರತದ ಹಿತಾಸಕ್ತಿಗಿಂತ ಚೀನಾದ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದೆ' ಎಂದು ಆರೋಪಿಸಿದ್ದಾರೆ.
ಈ ಹಿಂದೆ, 'ದೇಶದ ಪೂರ್ವ ಭಾಗದ ಜನರು ಚೀನಿಯರಂತೆ ಕಾಣುತ್ತಿದ್ದರೆ, ಪಶ್ಚಿಮದ ರಾಜ್ಯಗಳಲ್ಲಿರುವವರು ಅರಬ್ಬರಂತೆ ಕಾಣುತ್ತಾರೆ. ಉತ್ತರ ಭಾಗಗಳ ಜನರು ಬಿಳಿಯರಂತೆ ಕಂಡರೆ ದಕ್ಷಿಣದಲ್ಲಿರುವವರು ಆಫ್ರಿಕಾದವರಂತೆ ಕಾಣುತ್ತಾರೆ' ಎಂದು ಹೇಳಿಕೆ ನೀಡುವ ಮೂಲಕ ಪಿತ್ರೋಡಾ ಸುದ್ದಿಯಾಗಿದ್ದರು.