ನವದೆಹಲಿ: ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ತಗ್ಗಿಸುವಂತಹ ಯಾವುದೇ ಕ್ರಮವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ. ಮುಂದಿನ ಆದೇಶದವರೆಗೆ ಈ ಸೂಚನೆಯು ಜಾರಿಯಲ್ಲಿ ಇರಲಿದೆ.
2023ರ ಅರಣ್ಯ ಸಂರಕ್ಷಣಾ ಕಾನೂನಿಗೆ ತಂದಿರುವ ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ. ವಿನೋದ್ ಚಂದ್ರನ್ ಅವರು ಇರುವ ವಿಭಾಗೀಯ ಪೀಠವು ನಡೆಸುತ್ತಿದೆ.
'ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ತಗ್ಗಿಸುವ ಯಾವುದಕ್ಕೂ ನಾವು ಅವಕಾಶ ನೀಡುವುದಿಲ್ಲ. ಪರಿಹಾರ ರೂಪದಲ್ಲಿ ಬೇರೆ ಜಮೀನು ನೀಡಲು ಆಗದಿದ್ದರೆ, ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ಕಡಿಮೆ ಮಾಡುವಂತಹ ಯಾವ ಕ್ರಮವನ್ನೂ ಕೇಂದ್ರ, ರಾಜ್ಯ ಸರ್ಕಾರಗಳು ಕೈಗೊಳ್ಳಬಾರದು' ಎಂದು ಪೀಠವು ಸೂಚನೆ ನೀಡಿದೆ. ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಲಾಗಿದೆ.
2023ರಲ್ಲಿ ತಿದ್ದುಪಡಿಯಾದ ಕಾನೂನು 'ಅರಣ್ಯ'ದ ವ್ಯಾಖ್ಯಾನದಿಂದ ಸರಿಸುಮಾರು 1.99 ಲಕ್ಷ ಚದರ ಕಿ.ಮೀ. ಅರಣ್ಯ ಪ್ರದೇಶವನ್ನು ಹೊರಗಿರಿಸಿದೆ, ಈ ಪ್ರದೇಶವನ್ನು ಇತರ ಉದ್ದೇಶಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷದ ಫೆಬ್ರುವರಿಯಲ್ಲಿ ಗಣನೆಗೆ ತೆಗೆದುಕೊಂಡಿತ್ತು.
ಹೊಸದಾಗಿ ಮೃಗಾಲಯ ಆರಂಭಿಸಲು ಅಥವಾ ಅರಣ್ಯ ಪ್ರದೇಶದಲ್ಲಿ ಸಫಾರಿ ಆರಂಭಿಸಲು ತನ್ನ ಅನುಮತಿ ಪಡೆಯಬೇಕು ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿತ್ತು.