ನವದೆಹಲಿ: 'ಶಿಕ್ಷಣವು ಪ್ರತಿ ಮಗುವಿನ ಹಕ್ಕು. ಈ ವಿಷಯದಲ್ಲಿ ತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ರೋಹಿಂಗ್ಯಾ ನಿರಾಶ್ರಿತರ ಮಕ್ಕಳಿಗೆ ದೆಹಲಿಯ ಶಾಲೆಗಳಿಗೆ ಪ್ರವೇಶ ಕುರಿತ ಅರ್ಜಿಗೆ ಸಂಬಂಧಿಸಿದ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರಿದ್ದ ಪೀಠ ಈ ಮಾತು ಹೇಳಿತು.
'ಶಿಕ್ಷಣ ಕುರಿತು ತಾರತಮ್ಯದ ಪ್ರಶ್ನೆಯೇ ಇಲ್ಲ. ರೋಹಿಂಗ್ಯಾಗಳು ಎಲ್ಲಿ ವಾಸವಿದ್ದಾರೆ, ಅವರ ವಾಸಸ್ಥಳದ ಹಕ್ಕುಗಳೇನು ಎಂದು ತಿಳಿಸಿ' ಎಂದು ರೋಹಿಂಗ್ಯಾ ನಿರಾಶ್ರಿತರ ಮಾನವಹಕ್ಕುಗಳ ರಕ್ಷಣೆ ಕುರಿತು ಎನ್‌ಜಿಒ ಪರ ವಕೀಲರಿಗೆ ತಿಳಿಸಿತು.
'ರೋಹಿಂಗ್ಯಾ ನಿರಾಶ್ರಿತರಿಗೆ ವಿಶ್ವಸಂಸ್ಥೆಯ ಹೈಕಮಿಷನರ್ ನೀಡಿರುವ (ಯುಎನ್‌ಎಚ್‌ಸಿಆರ್) ಗುರುತಿನ ಚೀಟಿಗಳಿವೆ. ಈ ನಿರಾಶ್ರಿತರ ನೋಂದಣಿ ಬಳಿಕ ವಿಶ್ವಸಂಸ್ಥೆಯು ಇವರ ವಿವರಗಳನ್ನು ಪೊಲೀಸರಿಗೂ ನೀಡಲಿದ್ದು, ಪೊಲೀಸರು ಆಗಾಗ್ಗೆ ವಸ್ತುಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ' ಎಂದು ಎನ್‌ಜಿಒ ಪರ ವಕೀಲರು ಪೀಠದ ಗಮನಕ್ಕೆ ತಂದರು.
ಒಂದು ವೇಳೆ ರೋಹಿಂಗ್ಯಾಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಿದ್ದರೆ ಅದಕ್ಕೆ ಪೂರಕ ವರದಿಯ ಅಗತ್ಯವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೀಠವು ರೋಹಿಂಗ್ಯಾ ನಿರಾಶ್ರಿತರನ್ನು ಕುರಿತು ವರದಿ ಸಲ್ಲಿಸಲು ಸೂಚಿಸಿತು.
'ಮಕ್ಕಳ ಪಟ್ಟಿ ಇರಲಿ. ಮೊದಲು ಇವರ ಪೋಷಕರ ವಿವರ ನೀಡಿ. ಅವರು ಹೇಗೆ, ಎಲ್ಲಿ ವಾಸವಿದ್ದಾರೆ. ವಾಸವಿರಲು ಅನುಮತಿ ಕೊಟ್ಟವರಾರು..' ಇತ್ಯಾದಿ ಮಾಹಿತಿಗಳನ್ನು 10 ದಿನದಲ್ಲಿ ಒದಗಿಸಿ ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.