ತಪ್ಪಚಬುತ್ರ: ಇಲ್ಲಿನ ದೇವಸ್ಥಾನವೊಂದರ ಶಿವಲಿಂಗದ ಬಳಿ ಮಾಂಸದ ತುಂಡು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದ ಸದಸ್ಯರು, ಸ್ಥಳೀಯರು ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ದೇವಸ್ಥಾನದ ಶಿವಲಿಂಗದ ಬಳಿ ಯಾರೋ ಮಾಂಸದ ತುಂಡನ್ನು ಎಸೆದಿದ್ದು, ಪೂಜೆಗೆ ಬಂಧ ಭಕ್ತರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ದೇವಸ್ಥಾನ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.
ಘಟನೆ ಖಂಡಿಸಿ ಬಿಜೆಪಿ ಸದಸ್ಯರು, ಸ್ಥಳೀಯರು ದೇವಸ್ಥಾನದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
'ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಯಾರೋ ಕಿಡಿಗೇಡಿಗಳು ಇಂತಹ ಕೆಲಸ ಮಾಡಿರುವ ಸಾಧ್ಯತೆಯಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದ್ದು, ಘಟನೆಯನ್ನು ಅವಲೋಕಿಸುತ್ತಿದ್ದೇವೆ. ಮಾಂಸದ ತುಂಡನ್ನು ಮನುಷ್ಯರೇ ಎಸೆದಿದ್ದಾರಾ? ಅಥವಾ ಪ್ರಾಣಿಗಳು ತಂದಿರಬಹುದಾ? ಈ ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ' ಎಂದರು.