ರಾಯಪುರ: ಅಂಗಡಿ ಮುಂಗಟ್ಟುಗಳು ಹಾಗೂ ಸಂಸ್ಥೆಗಳನ್ನು ವಾರದ ಎಲ್ಲ ದಿನ ಹಾಗೂ ದಿನದ 24 ಗಂಟೆಯೂ ತೆರೆದಿರಲು ಅನುಮತಿಸುವ ಹಾಗೂ ಸುರಕ್ಷತಾ ಕ್ರಮಗಳೊಂದಿಗೆ ಮಹಿಳೆಯರು ರಾತ್ರಿಯೂ ಕೆಲಸ ಮಾಡಲು ಅವಕಾಶ ಕಲ್ಪಿಸುವ ಹೊಸ ಕಾನೂನನ್ನು ಛತ್ತೀಸಗಢ ಸರ್ಕಾರ ಜಾರಿಗೊಳಿಸಿದೆ.
10ಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುವ ಎಲ್ಲ ಮಳಿಗೆಗಳು/ಸಂಸ್ಥೆಗಳಿಗೆ ಈ ಕಾನೂನು ಅನ್ವಯವಾಗಲಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
'ರಾಜ್ಯ ಮಳಿಗೆಗಳು ಮತ್ತು ಸಂಸ್ಥೆಗಳು (ಉದ್ಯೋಗ ಕಾನೂನು ಮತ್ತು ಸೇವಾ ಷರತ್ತುಗಳು) ಕಾಯ್ದೆ, 2017 ಮತ್ತು ನಿಯಮಗಳು 2021ರ ಅಡಿಯಲ್ಲಿ ನೋಂದಣಿ ಶುಲ್ಕವು ಉದ್ಯೋಗಿಗಳ ಸಂಖ್ಯೆಗೆ ಅನುಗುಣವಾಗಿ ₹ 1,000 ದಿಂದ ₹ 10,000 ವರೆಗೆ ಇರಲಿದೆ. ಈ ಹಿಂದೆ ನೋಂದಣಿ ಶುಲ್ಕ, ₹ 100ರಿಂದ ₹ 250 ಇತ್ತು' ಎಂದು ಅವರು ಹೇಳಿದ್ದಾರೆ.
'ಮಳಿಗೆಗಳು/ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ವಾರಕ್ಕೆ ಒಮ್ಮೆ ವಾರದ ರಜೆ ನೀಡುವ ಮೂಲಕ ವಾರದ ಎಲ್ಲ ದಿನ ಹಾಗೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬಹುದು. ಇದಕ್ಕೂ ಮೊದಲು, ಮಳಿಗೆಗಳು ಮತ್ತು ಸಂಸ್ಥೆಗಳನ್ನು ವಾರದಲ್ಲಿ ಒಂದು ದಿನ ಮುಚ್ಚುವುದು ಕಡ್ಡಾಯವಾಗಿತ್ತು. ಸದ್ಯ, ಮಹಿಳಾ ಉದ್ಯೋಗಿಗಳಿಗೆ ಸುರಕ್ಷತಾ ಕ್ರಮಗಳೊಂದಿಗೆ ರಾತ್ರಿಯೂ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಾಲೀಕರು, ತಮ್ಮ ಸಿಬ್ಬಂದಿಗೆ ಸಂಬಂಧಿಸಿದಂತೆ ಇ-ದಾಖಲೆಗಳನ್ನು ನಿರ್ವಹಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಾರ್ಷಿಕ ವರದಿಯನ್ನು ಪ್ರತಿವರ್ಷ ಫೆಬ್ರುವರಿ 15ರೊಳಗೆ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.
'ಪ್ರತಿಯೊಂದು ಮಳಿಗೆಗಳು ಹಾಗೂ ಸಂಸ್ಥೆಗಳು, ಆರು ತಿಂಗಳೊಳಗೆ ಹೊಸ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳಬೇಕಿದೆ. ನೋಂದಣಿ ಕಾರ್ಯವನ್ನು ಕಾರ್ಮಿಕ ಇಲಾಖೆಯೇ ನೋಡಿಕೊಳ್ಳುತ್ತದೆ. ನೋಂದಣಿಯಾಗಿರುವ ಮಳಿಗೆಗಳು ಹಾಗೂ ಸಂಸ್ಥೆಗಳು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, ಆರು ತಿಂಗಳೊಳಗೆ ತಮ್ಮ ಕಾರ್ಮಿಕ ಗುರುತಿನ ಸಂಖ್ಯೆ (ಎಲ್‌ಐಎನ್) ಪಡೆದುಕೊಳ್ಳಬೇಕು' ಎಂದೂ ಮಾಹಿತಿ ನೀಡಿದ್ದಾರೆ.
ಈ ಕಾಯ್ದೆಯ ನಿಯಮಗಳು ಮದ್ಯದಂಗಡಿಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.