ಹೈದರಾಬಾದ್: ತೆಲಂಗಾಣದ ಸಿದ್ಧಿಪೇಟೆ ಜಿಲ್ಲೆಯ 25 ವರ್ಷ ವಯಸ್ಸಿನ ಮಹಿಳೆಯೊಬ್ಬರಲ್ಲಿ 'ಗೀಲನ್ ಬಾರೆ'(ಜಿಬಿಎಸ್) ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ಮೊದಲ ಪ್ರಕರಣ ಇದಾಗಿದೆ.
'ವೆಂಟಿಲೇಟರ್ ಸಹಾಯದೊಂದಿಗೆ ಸೋಂಕಿತೆಗೆ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಕಿಮ್ಸ್ ಆಸ್ಪತ್ರೆ ಶುಕ್ರವಾರ ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ಪುಣೆ ಮತ್ತು ಮಹಾರಾಷ್ಟ್ರದಲ್ಲಿ ಜಿಬಿಎಸ್ ಸೋಂಕು ವ್ಯಾಪಕವಾಗಿ ಹರಡಿದೆ. ಆದರೆ ತೆಲಂಗಾಣದ ಸೋಂಕಿತೆ ಮತ್ತು ಅವರ ಸಂಬಂಧಿಕರು ಪುಣೆಗೆ ಭೇಟಿ ನೀಡಿಲ್ಲ. ಜ್ವರ ಮತ್ತು ಭೇದಿಯ ಬಳಿಕ ನಮ್ಮ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯು ನಮ್ಮದೇ ನರಮಂಡಲಗಳ ಮೇಲೆ ತಪ್ಪಾಗಿ ದಾಳಿ ಮಾಡಿದಾಗ ಜಿಬಿಎಸ್ ಸೋಂಕು ತಗುಲುತ್ತದೆ' ಎಂದು ನರರೋಗ ತಜ್ಞ ಡಾ.ಪ್ರವೀಣ್ ಕುಮಾರ್ ಯಾದ ಅವರು ಹೇಳಿದ್ದಾರೆ.
ಮಹಿಳೆಯು ಒಂದು ವಾರ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟ ಕಾರಣ ಕಿಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
'ಜಿಬಿಎಸ್ ಪ್ರಕರಣವು ನಮ್ಮ ಗಮನಕ್ಕೆ ಬಂದಿಲ್ಲ' ಎಂದು ಸಿದ್ದಿಪೇಟೆಯ ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.