ಮಧೂರು: ಕುಂಬಳೆ ಸೀಮೆಯ ಪ್ರಸಿದ್ಧ ನಾಲ್ಕು ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತ ಸೋಮವಾರ ನೆರವೇರಿತು.
ಕ್ಷೇತ್ರದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಡಾ. ಶಿವಪ್ರಸಾದ್ ತಂತ್ರಿಯವರ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾದ್ಯಾಯ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪವಿತ್ರಪಾಣಿಗಳಾದ ಬಾರಿಕ್ಕಾಡು ರತನ್ ಕುಮಾರ್ ಕಾಮಡ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾದ್ಯಕ್ಷರಾದ ಸದಾಶಿವ ಶೆಟ್ಟಿ ಕುಳೂರುಕನ್ಯಾನ, ಶ್ರೀ ಕ್ಷೇತ್ರ ಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ, ಸಮಿತಿ ಅಧ್ಯಕ್ಷರಾದ ಮಂಜುನಾಥ ಕಾಮತ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ, ಸಮಿತಿ ಉಪಾಧ್ಯಕ್ಷರಾದ ರಾಜೀವನ್ ನಂಬ್ಯಾರ್, ಶ್ರೀ ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿಗಳಾದ ಟಿ. ರಾಜೇಶ್, ಚಪ್ಪರ ಸಮಿತಿಯ ಮುರಳಿ ಗಟ್ಟಿ ಹಾಗೂ ಕಾರ್ತಿಕ್ ಶೆಟ್ಟಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು. ಮಧೂರು ಕ್ಷೇತ್ರದಲ್ಲಿ ಮಾ. 27ರಿಂದ ಏ. 7ರ ವರೆಗೆ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಜರುಗಲಿದೆ.