ರಫಾ: ಹಮಾಸ್ ಬಂಡುಕೋರ ಸಂಘಟನೆಯು ರಫಾದಲ್ಲಿ ಇಬ್ಬರು ಮತ್ತು ನುಸೈರತ್‌ನಲ್ಲಿ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡಿದೆ. ಕದನ ವಿರಾಮ ಒಪ್ಪಂದದ ಪ್ರಕಾರ ಶನಿವಾರದಂದು ಒಟ್ಟು ಆರು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಬೇಕಿತ್ತು.
ಬಿಡುಗಡೆಗೊಂಡ ಒತ್ತೆಯಾಳುಗಳು ರೆಡ್ ಕ್ರಾಸ್ ಆಂಬುಲೆನ್ಸ್‌ಗಳಲ್ಲಿ ಇಸ್ರೇಲ್ ತಲುಪಿದರು.
ಒತ್ತೆಯಾಳುಗಳು ತಲುಪಿದ ಬಗ್ಗೆ ಇಸ್ರೇಲ್ ಸೇನೆ ದೃಢಪಡಿಸಿದೆ. ಎರಡೂ ನಗರಗಳಲ್ಲಿ ದೊಡ್ಡ ಜನದಟ್ಟಣೆಯ ಮಧ್ಯೆ ವೇದಿಕೆಗಳಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.
ನಸ್ರುಲ್ಲಾ ಅಂತ್ಯಕ್ರಿಯೆ ಇಂದು (ಟೆಹರಾನ್ ವರದಿ) : ಇರಾನ್ ಬೆಂಬಲಿತ, ಲೆಬನಾನ್‌ನಲ್ಲಿ ಕಾರ್ಯನಿರ್ವಹಿಸುವ ಹಿಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ ಅವರನ್ನು 2024ರ ಸೆಪ್ಟೆಂಬರ್‌ನಲ್ಲಿ ಇಸ್ರೇಲ್ ಹತ್ಯೆ ಮಾಡಿತ್ತು. ನಸ್ರಲ್ಲಾ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ. ಅಂತ್ಯಕ್ರಿಯೆಯಲ್ಲಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘೇರ್ ಗಾಲಿಬಫ್ ಭಾಗವಹಿಸಲಿದ್ದಾರೆ ಎಂದು ಇರಾನ್ ಹೇಳಿದೆ.