ಜೈಪುರ: ದಕ್ಷಿಣ ಭಾರತದ ರಾಜರ ಅಡಳಿತ ವೈಖರಿ, ಅಂತಃಪುರದಲ್ಲಿ ರಾಣಿಯರ ವಿಲಾಸ, 'ಸೆರೆ'ಯಾದ ಮಹಿಳೆಯರ ಸ್ಥಿತಿಗತಿಯ ಕುರಿತ ಚರ್ಚೆ ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾನುವಾರ ಸಾಹಿತಿ- ಚಿಂತಕರ ಮನಮಿಡಿಯುವಂತೆ ಮಾಡಿತು.
ದೇಶ ಮತ್ತು ರಾಜ್ಯಗಳಲ್ಲಿ ಈಗಲೂ ದಬ್ಬಾಳಿಕೆಯ ಪ್ರವೃತ್ತಿ ಇದೆ ಎಂಬ ಆರೋಪವೂ ಗೋಷ್ಠಿಗಳಲ್ಲಿ ಕೇಳಿಬಂತು.
'ಬೈಠಕ್'ನಲ್ಲಿ ನಡೆದ 'ನೆಲ ಮತ್ತು ಜಲದ ಒಡೆಯರು: ಚೋಳರ ಆಡಳಿತದ ಇತಿಹಾಸ' ಎಂಬ ಗೋಷ್ಠಿಯಲ್ಲಿ ಮನು ಎಸ್.ಪಿಳ್ಳೆ ಜೊತೆ ಮಾತುಕತೆ ನಡೆಸಿದ ಇತಿಹಾಸಕಾರ ಅನಿರುದ್ಧ ಕನಿಸೆಟ್ಟಿ ಅವರು ಯುದ್ಧದಲ್ಲಿ ಸಾಗಾಟ ಸಾಮರ್ಥ್ಯವು ಗೆಲುವಿಗೆ ಪ್ರಮುಖ ಕಾರಣವಾಗುತ್ತದೆ. ಚೋಳರು ಈ ವಿಷಯದಲ್ಲಿ ಮುಂದಿದ್ದರು ಎಂದರು.
'ತಂಜಾವೂರಿನ ವಿಮಾನೇರ‍್ವರ ದೇವಸ್ಥಾನವನ್ನು ಏಳು ವರ್ಷಗಳಲ್ಲಿ ನಿರ್ಮಿಸಲಾಗಿತ್ತು. ಆ ಕಾಲದಲ್ಲಿ ಇದಕ್ಕಾಗಿ ಏಳು ಸಾವಿರ ಟನ್ ಗ್ರಾನೈಟ್ ತೆಗೆದುಕೊಂಡು ಬರಲಾಗಿತ್ತು. ಚೋಳರ ಸಾಗಾಟ ಸಾಮರ್ಥ್ಯಕ್ಕೆ ಅದು ಉತ್ತಮ ನಿದರ್ಶನ' ಎಂದು ಅವರು ಹೇಳಿದರು.
'ಯುದ್ಧ ಚೋಳರ ಪ್ರಮುಖ ಅಸ್ತ್ರವಾಗಿತ್ತು. ರಾಜರಾಜ ಚೋಳ ಈ ಕುರಿತು ಶಾಸನಗಳಲ್ಲಿ ಅಭಿಮಾನದಿಂದ ಹೇಳಿಕೊಂಡಿದ್ದಾನೆ. ರಾಜಾಡಳಿತದ ಕಾಲದಲ್ಲಿ ಯುದ್ಧದ ಸಂದರ್ಭದಲ್ಲಿ ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಪ್ರಾಣಿಗಳು ಮತ್ತು ಸಂಪತ್ತನ್ನು ವಶಪಡಿಸಿಕೊಂಡಂತೆಯೇ ಮಹಿಳೆಯರನ್ನು ಸೆರೆ ಹಿಡಿಯುತ್ತಿದ್ದರು. ಚೋಳ ರಾಜರು ಕೂಡ ಇಂಥ ಕ್ರೌರ್ಯದಿಂದ ಹೊರತಾಗಿರಲಿಲ್ಲ' ಎಂದು ಅವರು ಹೇಳಿದರು.
ಹಿಂದುತ್ವದ ನಾನಾ ಮುಖಗಳ ಚರ್ಚೆ:
ಹಿಂದುತ್ವದ ನಾನಾ ಮುಖಗಳ ಚರ್ಚೆಯೂ ಗೋಷ್ಠಿಗಳಲ್ಲಿ ನಡೆಯಿತು. ಪುರುಷಾರ್ಥದ ಕುರಿತ ಸಂವಾದದಲ್ಲಿ 'ಹಿಂದುತ್ವಕ್ಕೆ ನಾನಾ ಮುಖಗಳು ಇದ್ದು ಚಾರ್ವಾಕ ಪದ್ಧತಿಯೂ ಅದರಲ್ಲಿ ಒಂದು. ಜ್ಞಾನ, ಶಿಕ್ಷಣ, ನೊಂದವರ ಕೈ ಹಿಡಿಯುವುದು ಕೂಡ ಹಿಂದುತ್ವದ ಭಾಗವೇ ಆಗಿದೆ. ಶ್ರೀರಾಮ್ ಎಂದು ಹೇಳದೇ ಇದ್ದರೆ ತಲೆ ಒಡೆಯುವ ಸಿದ್ಧಾಂತ ಹಿಂದೂಗಳದ್ದಲ್ಲ' ಎಂದು ಸಂಸದ ಶಶಿ ತರೂರು ಹೇಳಿದರು.
ರಾಜಕೀಯ ಹಿಂದುತ್ವದ ಜನನ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಹಿಂದೋಳ್ ಸೇನ್ ಗುಪ್ತಾ, ಹಿಂದುತ್ವದ ರಾಜಕೀಯ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಒಳಗೇ ಉತ್ಪತ್ತಿ ಆಗುತ್ತದೆಯೇ ಅಥವಾ ಬೇರೆ ಯಾವುದಾದರೂ ಮೂಲಗಳಿವೆಯೇ ಎಂಬುದನ್ನು ಪತ್ತೆಮಾಡಬೇಕಾಗಿದೆ ಎಂದರು.
'ಹಿಂದುತ್ವವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಪಕ್ಷಗಳು ದೇಶದ ಸಾಂಸ್ಕೃತಿಕ ಆಯಾಮಗಳ ಬಗ್ಗೆ ಯೋಚನೆ ಮಾಡುವುದಿಲ್ಲ' ಎಂದರು.
ಸಾವರ್ಕರ್ ಮತ್ತು ಮಹಾರಾಷ್ಟ್ರದ ಬಗ್ಗೆ ಮಾತನಾಡಿದ ಜಾನಕಿ ಬಾಕಳೆ ಸಾವರ್ಕರ್ ಧಾರ್ಮಿಕ ಮೂಲಭೂತವಾದಿ ಆಗಿರಲಿಲ್ಲ. ಪ್ರಾದೇಶಿಕವಾಗಿ ಪೂರ್ವಗ್ರಹಪೀಡಿತರಾಗಿದ್ದರು. ಜಾತಿ ವಿರೋಧಿ ಆಗಿದ್ದುದರಿಂದ ಸನಾತನಿಗಳಿಂದಲೇ ಅವರು ವಿರೋಧ ಎದುರಿಸಿದ್ದರು ಎಂದರು.
ಚೋಳರ ಆಡಳಿತದ ಬಗ್ಗೆ ಮನು ಪಿಳ್ಳೈ (ಎಡ) ಜೊತೆ ಅನಿರುದ್ಧ ಕನಿಸೆಟ್ಟಿ ಮಾತನಾಡಿದರು