ವಿಶ್ವಸಂಸ್ಥೆ/ಜಿನೀವಾ: 'ಪಾಕಿಸ್ತಾನ ಈಗ ಅಂತರರಾಷ್ಟ್ರೀಯ ನೆರವಿನಲ್ಲಿರುವ 'ವಿಫಲ ರಾಷ್ಟ್ರ'. ಜಮ್ಮು-ಕಾಶ್ಮೀರ ಕುರಿತಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಅದು ಇಲ್ಲಸಲ್ಲದ್ದನ್ನು ಪ್ರಸ್ತಾಪಿಸಿರುವುದು ವಿಷಾದನೀಯ' ಎಂದು ಭಾರತ ಗುರುವಾರ ಟೀಕಿಸಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಪಾಕ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ವಿಷಯ ಪ್ರಸ್ತಾಪಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಭಾರತ, 'ಪಾಕ್ ಆಧಾರರಹಿತ ಮತ್ತು ದುರುದ್ದೇಶದಿಂದ ವಿಷಯ ಪ್ರಸ್ತಾಪಿಸಿರುವುದು ವಿಷಾದನೀಯ' ಎಂದು ಪ್ರತಿಕ್ರಿಯಿಸಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್‌ನ ಕೌನ್ಸೆಲರ್ ಆದ ಕ್ಷಿತಿಜ್ ತ್ಯಾಗಿ ಅವರು, 'ವಿಫಲ ರಾಷ್ಟ್ರವೊಂದು ಈ ಮೂಲಕ ಮಂಡಳಿಯ ಸಮಯವನ್ನು ಪೋಲು ಮಾಡುತ್ತಿದೆ. ಪಾಕಿಸ್ತಾನದ್ದು ಬೂಟಾಟಿಕೆ ಮಾತು. ಅದರ ನಡೆ ಅಮಾನವೀಯವಾದುದು. ಅದರ ಆಡಳಿತವು ಅದಕ್ಷತೆಯಿಂದ ಕೂಡಿದ್ದು' ಎಂದು ಕಟುವಾಗಿ ಟೀಕಿಸಿದ್ದಾರೆ.
'ಕೇಂದ್ರಾಡಳಿತ ಪ್ರದೇಶಗಳಾಗಿರುವ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂದಿಗೂ ಭಾರತದ ಭಾಗವಾಗಿವೆ ಹಾಗೂ ಹಾಗೇ ಉಳಿಯಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ವಾರಗಳಲ್ಲಿ ಆಗಿರುವ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ, ರಾಜಕೀಯ ಬದಲಾವಣೆ ಈ ಮಾತಿಗೆ ನಿದರ್ಶನವಾಗಿದೆ' ಎಂದು ತ್ಯಾಗಿ ಅವರು ಪ್ರತಿಪಾದಿಸಿದ್ದಾರೆ.