ಚಂಡೀಗಢ: ಅಮೆರಿಕದಿಂದ ಗಡಿಪಾರು ಮಾಡಲಾದ ಭಾರತೀಯ ವಲಸಿಗರನ್ನು "ಅಪರಾಧಿಗಳು" ಎಂದು ಕರೆದಿರುವ ಕೇಂದ್ರ ಸಚಿವ ಮತ್ತು ಹರಿಯಾಣ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ಅವರಿಗೆ "ಯಾವುದೇ ಸಹಾನುಭೂತಿ" ತೋರಿಸಬಾರದು ಎಂದು ಗುರುವಾರ ಹೇಳಿದ್ದಾರೆ.
"ಅಕ್ರಮವಾಗಿ ಬೇರೆ ದೇಶವನ್ನು ಪ್ರವೇಶಿಸಿದವರು ಅಪರಾಧಿಗಳು. ಅವರ ಬಗ್ಗೆ ಯಾವುದೇ ಸಹಾನುಭೂತಿ ತೋರಿಸಬಾರದು. ನಮ್ಮ ಜನ, ಈ ರೀತಿಯ ಪ್ರಯಾಣ ಕೈಗೊಳ್ಳದಂತೆ ಸಲಹೆ ನೀಡಿದ್ದರೂ ಸಹ ನಿರ್ಲಕ್ಷ್ಯ ಮಾಡುತ್ತಾರೆ. ಇದು ಮಾದಕ ವ್ಯಸನದಷ್ಟೇ ಕೆಟ್ಟದು. ನಾವು ಅವರ ಬಗ್ಗೆ ಏಕೆ ಸಹಾನುಭೂತಿ ತೋರಿಸಬೇಕು?'' ಎಂದು ಪ್ರಶ್ನಿಸಿದ್ದಾರೆ.
ಗಡಿಪಾರು ಮಾಡಲ್ಪಟ್ಟ ಭಾರತೀಯರು ಎದುರಿಸದ ಅಮಾನವೀಯ ಪರಿಸ್ಥಿತಿಗಳ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, "ದೇಶಕ್ಕೆ ಹಿಂದಿರುಗಿದ ವಲಸಿಗರಿಗೆ ಹೇಗೆ ಪುನರ್ವಸತಿ ಕಲ್ಪಿಸುವುದು ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
"ಈಗ ನಾವು ಅವರಿಗೆ ಹೇಗೆ ಪುನರ್ವಸತಿ ಕಲ್ಪಿಸಬೇಕು ಎಂಬುದು ನಮ್ಮ ಚಿಂತೆಯಾಗಿದೆ" ಎಂದು ಖಟ್ಟರ್ ಹೇಳಿದರು.
ಅಮೆರಿಕದಿಂದ ಗಡಿಪಾರು ಮಾಡಲಾದ ಭಾರತೀಯ ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಂಡ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಟೀಕೆಗಳ ಮಧ್ಯೆ ಖಟ್ಟರ್ ಅವರ ಈ ಹೇಳಿಕೆ ಬಂದಿದೆ.
ದೇಶದಿಂದ ಹೆಚ್ಚುತ್ತಿರುವ ವಲಸೆಯ ಬಗ್ಗೆ ಮಾತನಾಡಿದ ಖಟ್ಟರ್, ಹರಿಯಾಣದ ಕರ್ನಾಲ್‌ನಲ್ಲಿರುವ ದಾಬ್ರಿ ಗ್ರಾಮದ ಉದಾಹರಣೆಯನ್ನು ಉಲ್ಲೇಖಿಸಿದರು. ಅಲ್ಲಿಂದ 300 ಕ್ಕೂ ಹೆಚ್ಚು ಯುವಕರು 'ಡಂಕಿ ರೂಟ್' ಮೂಲಕ ವಿದೇಶಕ್ಕೆ ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದೆ ಎಂದರು.
ಕಳೆದ ವರ್ಷ ನಡೆದ ಸಂಸತ್ ಚುನಾವಣೆಯ ಸಮಯದಲ್ಲಿ, ನಾನು ಆ ಗ್ರಾಮಕ್ಕೆ ಭೇಟಿ ನೀಡಿದ್ದೆ. ಇಡೀ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಮಾತ್ರ ಸರ್ಕಾರಿ ಉದ್ಯೋಗಿಯಾಗಿದ್ದಾನೆ ಎಂದು ತಿಳಿದು ಆಘಾತವಾಯಿತು ಎಂದು ಖಟ್ಟರ್ ಹೇಳಿದ್ದಾರೆ.
ವಿದೇಶಕ್ಕೆ ಹೋಗುವ ವ್ಯಕ್ತಿ ಹಿಂತಿರುಗಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಖಾತರಿ ಇಲ್ಲದ ಕಾರಣ ಅಂತಹ ವಿಧಾನಗಳ ಮೂಲಕ ವಿದೇಶಕ್ಕೆ ಪ್ರಯಾಣಿಸುವುದು ಕಾನೂನುಬಾಹಿರ ಎಂದು ಖಟ್ಟರ್ ಒತ್ತಿ ಹೇಳಿದರು.