ಚೆನ್ನೈ: 'ತ್ರಿಭಾಷಾ ಸೂತ್ರ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಒಪ್ಪಿಕೊಳ್ಳುವವರೆಗೆ ತಮಿಳುನಾಡಿಗೆ ಅನುದಾನ ಒದಗಿಸಲಾಗದು' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭಾನುವಾರ ಖಂಡಿಸಿದ್ದಾರೆ. ಇದೊಂದು 'ಬ್ಲ್ಯಾಕ್‌ಮೇಲ್' ತಂತ್ರ' ಎಂದು ಕಿಡಿಕಾರಿದ್ದಾರೆ.
ವಾರಾಣಸಿಯಲ್ಲಿ ಫೆ.15ರಂದು ಈ ಸಂಬಂಧ ಪ್ರಧಾನ್ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಜೊತೆಗೆ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಸ್ಟಾಲಿನ್ ಅವರು, 'ಇಂತಹ ಬೆದರಿಕೆಯು ಸ್ವೀಕಾರಾರ್ಹವಲ್ಲ. ತಮಿಳುನಾಡು ಇಂತಹದನ್ನು ಸಹಿಸುವುದೂ ಇಲ್ಲ' ಎಂದಿದ್ದಾರೆ.
'ಅನುದಾನ ರಾಜ್ಯದ ಹಕ್ಕು. ಬಾಕಿ ಉಳಿದಿರುವ ಅನುದಾನ ಬಿಡುಗಡೆಗೆ ರಾಜ್ಯ ಒತ್ತಾಯಿಸಿದೆ. ಆದರೆ, ತಮ್ಮ ಸ್ವಂತ ಆಸ್ತಿ ಕೇಳುತ್ತಿದ್ದಾರೆ ಎಂಬರ್ಥದಲ್ಲಿ ಅಹಂನಿಂದ ಕೇಂದ್ರ ಸಚಿವರು ಮಾತನಾಡುತ್ತಿದ್ದಾರೆ' ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ತ್ರಿಭಾಷಾ ಸೂತ್ರ ಕಡ್ಡಾಯ ಎಂದು ಉಲ್ಲೇಖಿಸಿರುವ ಸಂವಿಧಾನದ ಅಂಶವನ್ನು ಕೇಂದ್ರ ಸಚಿವರು ತೋರಿಸಲಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.
ಇದಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, 'ಮುಖ್ಯಮಂತ್ರಿ ಅವರ ಮೊಮ್ಮಕ್ಕಳು ಖಾಸಗಿ ಶಾಲೆಯಲ್ಲಿ ಮೂರು ಭಾಷೆ ಕಲಿಯುತ್ತಿರುವಾಗ, ಸರ್ಕಾರಿ ಶಾಲೆಯ ಮಕ್ಕಳು ತಮಿಳು, ಇಂಗ್ಲಿಷ್ ಜೊತೆ ಮತ್ತೊಂದು ಭಾಷೆ ಏಕೆ ಕಲಿಯಬಾರದು' ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡು ರಾಜ್ಯ ಭಾರತದ ಸಂವಿಧಾನದ ಅನುಸಾರ ರಚನೆಯಾಗಿದೆ. ತ್ರಿಭಾಷಾ ಸೂತ್ರ ಎಂಬುದು ಈ ನೆಲದ ಕಾನೂನಾಗಿದೆ ಎಂದು ಪ್ರಧಾನ್ ಹೇಳಿದ್ದರು.