ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತ ಎರಡು ಮಸೂದೆಗಳ ಪರಿಶೀಲನೆಗೆ ರಚಿಸಿರುವ ಜಂಟಿ ಸಂಸದೀಯ ಸಮಿತಿಯ ಸಭೆ ಮಂಗಳವಾರ ನಡೆದಿದ್ದು, ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ಭಾರತೀಯ ಕಾನೂನು ಆಯೋಗದ ಮಾಜಿ ಅಧ್ಯಕ್ಷ ರಿತು ರಾಜ್ ಅವಸ್ಥಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಏಕಕಾಲದಲ್ಲಿ ಚುನಾವಣೆ ನಡೆಸುವುದು ಸೈದ್ಧಾಂತಿಕವಾಗಿ ಸುಲಭವಾಗಿ ಕಾಣುತ್ತದೆ. ಆದರೆ, ಅದರ ಸುಗಮ ಅನುಷ್ಠಾನಕ್ಕೆ ಹಲವು ವಿಷಯಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಲಲಿತ್ ಅಭಿಪ್ರಾಯಪಟ್ಟರು ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಏಕಕಾಲ ಚುನಾವಣೆಯನ್ನು ಹಂತ ಹಂತವಾಗಿ ಜಾರಿಗೊಳಿಸುವ ವಿಚಾರವೂ ಸೇರಿದಂತೆ ಹಲವು ಸಲಹೆಗಳನ್ನು ಲಲಿತ್ ಅವರು ನೀಡಿದರು ಎಂದು ಅವು ಹೇಳಿವೆ.
ಏಕಕಾಲದಲ್ಲಿ ಚುನಾವಣೆ ನಡೆಸುವ ಪರಿಕಲ್ಪನೆಯನ್ನು ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಟೀಕಿಸಿದರು.
'ಒಂದು ದೇಶ ಒಂದು ಚುನಾವಣೆ' ವಿಧಾನವು ಜನಪ್ರತಿನಿಧಿಗಳ ಅಧಿಕಾರಾವಧಿ ಬಗ್ಗೆ ಗೊಂದಲ ಸೃಷ್ಟಿಸುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಮತ್ತು ಜನರ ಹಕ್ಕುಗಳನ್ನು ಮೊಟಕುಗೊಳಿಸಿದಂತೆ ಆಗುತ್ತದೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಪಾದಿಸಿದರು ಎಂದು ಮೂಲಗಳು ತಿಳಿಸಿವೆ.
ಎರಡು ಚುನಾವಣೆಗಳ ನಡುವೆ ಐದು ವರ್ಷ ಅಂತರವಿದ್ದರೆ, ಅದು ಜನಪ್ರತಿನಿಧಿಗಳ ಹೊಣೆಗಾರಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ಬಿಜೆಪಿ ಮಿತ್ರ ಪಕ್ಷವೊಂದರ ನಾಯಕರು ಹೇಳಿದರು ಎಂದು ಅವು ಹೇಳಿವೆ.
ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಕಾರ್ಯದರ್ಶಿ, ಐಎಎಸ್ ಅಧಿಕಾರಿ ನಿತಿನ್ ಚಂದ್ರ ಅವರು ಸಮಿತಿ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಆಗುವ ಉಳಿತಾಯ, ಅಭಿವೃದ್ಧಿಗೆ ದೊರೆಯುವ ಉತ್ತೇಜನ ಸೇರಿದಂತೆ ವಿವಿಧ ಅನುಕೂಲಗಳ ಬಗ್ಗೆ ರಿತು ರಾಜ್ ಅವಸ್ಥಿ ಅವರು ವಿವರಿಸಿದರು.
ಹಿರಿಯ ವಕೀಲ, ಕಾಂಗ್ರೆಸ್‌ನ ಮಾಜಿ ಸಂಸದ ಇ.ಎಂ. ಸುದರ್ಶನ ನಾಚಿಯಪ್ಪನ್ ಅವರೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ಜಂಟಿ ಸಂಸದೀಯ ಸಮಿತಿಯು ಮಂಗಳವಾರ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿತು.