ಗುವಾಹಟಿ: ಮೇಘಾಲಯದ 'ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಮೇಘಾಲಯ' (ಯುಎಸ್‌ಟಿಎಂ) ಕುಲಪತಿ ಮೆಹಬೂಬ್ ಉಲ್ ಹಕ್ ಅವರನ್ನು ಅಸ್ಸಾಂ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಯುಎಸ್‌ಟಿಎಂ ಖಾಸಗಿ ವಿಶ್ವವಿದ್ಯಾಲಯ.
ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಸಂಬಂಧಿಸಿದ ವಿಚಾರವಾಗಿ ಹಕ್ ಅವರನ್ನು ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಕ್ ಅವರು ಸ್ಥಾಪಿಸಿದ ಶಿಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ನಡೆಸುವ ಶಾಲೆಯೊಂದರಲ್ಲಿ ಶುಕ್ರವಾರ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಯುಎಸ್‌ಟಿಎಂ ವಿಶ್ವವಿದ್ಯಾಲಯವು ನಕಲಿ ಪದವಿ ಪ್ರಮಾಣಪತ್ರವನ್ನು ನೀಡುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಈಚೆಗೆ ಆರೋಪಿಸಿದ್ದರು.
ಈ ವಿಶ್ವವಿದ್ಯಾಲಯವು 'ಪ್ರವಾಹ ಜಿಹಾದ್‌ನಲ್ಲಿ' ತೊಡಗಿದೆ ಎಂದು ಶರ್ಮ ಅವರು ಕಳೆದ ವರ್ಷ ಆರೋಪಿಸಿದ್ದರು. ಮೇಘಾಲಯದಲ್ಲಿ ಬೆಟ್ಟಗಳನ್ನು ಕಡಿದು ಈ ವಿಶ್ವವಿದ್ಯಾಲಯ ನಿರ್ಮಿಸಿರುವ ಕಾರಣಕ್ಕೆ ಗುವಾಹಟಿಯಲ್ಲಿ ಹಠಾತ್ ಪ್ರವಾಹದ ಸ್ಥಿತಿಯು ಬಿಗಡಾಯಿಸಿದೆ ಎಂದು ಶರ್ಮ ಆರೋಪಿಸಿದ್ದರು.
ಹಕ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಹೇಳಿಕೆ ನೀಡಿಲ್ಲ.