ಬೆಂಗಳೂರು: ಎಫ್‌ಐಐಟಿ ಜೆಇಇ ತರಬೇತಿ ಕೇಂದ್ರಗಳು ದೇಶದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿವೆ. ಇದನ್ನು ಸಹಿಸದೆ ನಮ್ಮ ಬ್ರ್ಯಾಂಡ್ ಮೌಲ್ಯಕ್ಕೆ ಪ್ರತಿಸ್ಪರ್ಧಿಗಳಿಂದ ಧಕ್ಕೆ ತರುವ ಪಿತೂರಿ ನಡೆದಿದೆ ಎಂದು ಎಫ್‌ಐಐಟಿ ಜೆಇಇ ಸಮೂಹ ತಿಳಿಸಿದೆ.
ಐಐಟಿ-ಜೆಇಇ ಸೇರಿ ಹಲವು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶಕ್ಕೆ ದೇಶದಾದ್ಯಂತ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಸಜ್ಜುಗೊಳಿಸಲಾಗುತ್ತಿದೆ. ಸಂಸ್ಥೆಗೆ ಒಳ್ಳೆಯ ಹೆಸರು ಇದೆ. ಇದಕ್ಕೆ ಧಕ್ಕೆ ತರಲು ಪ್ರತಿಸ್ಪರ್ಧಿಗಳ ಜೊತೆಗೆ ತರಬೇತಿ ಕೇಂದ್ರದ ಕೆಲವು ಬೋಧಕರು ಕೂಡ ಕೈಜೋಡಿಸಿದ್ದಾರೆ. ಇದರ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಕಿವಿಗೊಡಬಾರದು ಎಂದು ಕೋರಿದೆ.
'ಸತ್ಯ, ಪಾರದರ್ಶಕತೆ ಮತ್ತು ಬದ್ಧತೆಯೇ ತರಬೇತಿ ಸಂಸ್ಥೆಯ ಧ್ಯೇಯವಾಗಿದೆ. ಸದಸ್ಯರು ಇದನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಕಂಪನಿಯ ಹಣಕಾಸಿನ ಸ್ಥಿತಿಗತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದ್ದಾಗಿ ಚಿತ್ರಿಸಲಾಗುತ್ತಿದೆ. ಹಾಗಾಗಿ, ಸಂಸ್ಥೆಯ ಪಾರದರ್ಶಕತೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ' ಎಂದು ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಡಿ.ಕೆ. ಗೋಯಲ್ ತಿಳಿಸಿದ್ದಾರೆ.
ಅಧ್ಯಕ್ಷರ ಸೂಚನೆ ಮೇರೆಗೆ ಆಡಳಿತ ಮಂಡಳಿಯ ಸಭೆ ನಡೆದಿದೆ. ಕಳೆದ 10 ವರ್ಷಗಳ ಲೆಕ್ಕಪತ್ರ, ಪ್ರಮಾಣಿತ ಕಾರ್ಯಾಚರಣೆ ವಿಧಾನ ಹಾಗೂ ಕಾರ್ಪೊರೇಟ್ ವಹಿವಾಟಿನ ಬಗ್ಗೆ ಪ್ರತಿಷ್ಠಿತ ಲೆಕ್ಕಪರಿಶೋಧಕ ಸಂಸ್ಥೆಯಿಂದ ಪಾರದರ್ಶಕವಾಗಿ ತಪಾಸಣೆ ನಡೆಸಲು ಆಡಳಿತ ಮಂಡಳಿಯು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ.
ಕಂಪನಿ ಬಗ್ಗೆ ಕೇಳಿಬಂದಿರುವ ಆರೋಪದ ಬಗ್ಗೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಡಿ ವಿಚಾರಣೆ ನಡೆಸಲು ಸಮಿತಿ ರಚನೆ ಬಗ್ಗೆ ಸಭೆಯು ಒಪ್ಪಿಗೆ ನೀಡಿದೆ.