ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ ಅವರಿಗೆ ಮರಣದಂಡನೆ ವಿಧಿಸಬೇಕೆಂದು ಪ್ರಾಸಿಕ್ಯೂಷನ್ ಕೋರಿದೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಇನ್ನೂ ಲಿಖಿತ ದಾಖಲೆಗಳನ್ನು ಸಲ್ಲಿಸಿಲ್ಲ. ಆದರೆ , ನಿರ್ಭಯಾ ಮತ್ತು ಇತರ ಪ್ರಕರಣಗಳಲ್ಲಿನ ಮಾರ್ಗಸೂಚಿಗಳ ಆಧಾರದ ಮೇಲೆ ಅವರಿಗೆ ಮರಣದಂಡನೆಯನ್ನು ವಿಧಿಸುವಂತೆ ಕೋರಿದ್ದಾರೆ ಎಂದು ವರದಿಯಾಗಿದೆ.
1984ರ ಸಿಖ್ ವಿರೋಧಿ ದಂಗೆ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ದೆಹಲಿಯ ನ್ಯಾಯಾಲಯ ಬುಧವಾರ (ಫೆ.12) ತೀರ್ಪು ನೀಡಿದೆ. ಫೆ.21ರಂದು ಶಿಕ್ಷೆಯ ಕುರಿತಾದ ವಾದಗಳನ್ನು ಆಲಿಸಲು ನ್ಯಾಯಾಲಯವು ಪ್ರಕರಣವನ್ನು ಪಟ್ಟಿ ಮಾಡಿದೆ.
ಪ್ರಕರಣದ ಹಿನ್ನೆಲೆ:
ಸಿಖ್ ವಿರೋಧಿ ದಂಗೆಯ ವೇಳೆ(1984ರ ನವೆಂಬರ್ 1ರಂದು) ಸರಸ್ವತಿ ವಿಹಾರ್ ಬಳಿ ಜಸ್ವಂತ್ ಸಿಂಗ್ ಹಾಗೂ ಅವರ ಪುತ್ರ ತರುಣ್‌ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಪ್ರಮುಖ ಆರೋಪಿಯಾಗಿದ್ದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಕ್ಕಾಗಿ ಮಾರಕಾಸ್ತ್ರಗಳನ್ನು ಹಿಡಿದಿದ್ದ ಜನರ ಗುಂಪು, ಸಿಖ್ ಸಮುದಾಯದವರಿಗೆ ಸೇರಿದ ಸ್ಥಳಗಳಲ್ಲಿ ಭಾರಿ ಲೂಟಿ ನಡೆಸಿತ್ತು. ಗಲಭೆ ಸೃಷ್ಟಿಸಿ, ಅಪಾರ ಹಾನಿಗೆ ಕಾರಣವಾಗಿತ್ತು. ಆಗ ಮನೆಗೆ ನುಗ್ಗಿದ ಉದ್ರಿಕ್ತರು, ಪತಿ ಹಾಗೂ ಮಗನನ್ನು ಹತ್ಯೆ ಮಾಡಿದ್ದರು. ಬಳಿಕ ಲೂಟಿ ಮಾಡಿ, ಮನೆಗೆ ಬೆಂಕಿ ಹಚ್ಚಿದ್ದರು ಎಂದು ಜಸ್ವಂತ್ ಪತ್ನಿ ಸಾಕ್ಷಿ ನುಡಿದಿರುವುದಾಗಿ ಪ್ರಾಸಿಕ್ಯೂಷನ್ ಆರೋಪಪಟ್ಟಿಯಲ್ಲಿ ಹೇಳಿದ್ದಾರೆ.
ಸಜ್ಜನ್ ಕುಮಾರ್ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದ್ದ ನ್ಯಾಯಾಲಯವು, 2021ರ ಡಿಸೆಂಬರ್ 16ರಂದು ಸಜ್ಜನ್ ಕುಮಾರ್ ವಿರುದ್ಧ ಆರೋಪ ಹೊರಿಸಿತ್ತು.