ಭೋಪಾಲ್: 'ಮೇಡ್ ಇನ್ ಇಂಡಿಯಾ' ಸೆಮಿಕಂಡಕ್ಟರ್ ಚಿಪ್ ಇದೇ ವರ್ಷ ಸಿದ್ಧವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಭೋಪಾಲ್‌ನಲ್ಲಿ ನಡೆಯುತ್ತಿರುವ 'ಜಾಗತಿಕ ಹೂಡಿಕೆದಾರರ ಶೃಂಗಸಭೆ 2025'ರಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
ಮಧ್ಯಪ್ರದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯು ಗಮನಾರ್ಹ ವೇಗ ಪಡೆದುಕೊಂಡಿದೆ.
ಎರಡು ಎಲೆಕ್ಟ್ರಾನಿಕ್ ಉತ್ಪಾದನಾ ಕ್ಲಸ್ಟರ್‌ಗಳನ್ನು ಪ್ರಧಾನಿ ಮೋದಿ ಅವರು ಭೋಪಾಲ್ ಮತ್ತು ಜಬಲ್‌ಪುರದಲ್ಲಿ ಅನುಮೋದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಪ್ರಸ್ತುತ 85 ಕಂಪನಿಗಳು ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಇದು ಡಬಲ್ ಎಂಜಿನ್ ಸರ್ಕಾರದ ಪ್ರಮುಖ ಯಶಸ್ಸು ಎಂದು ವೈಷ್ಣವ್ ತಿಳಿಸಿದ್ದಾರೆ.
ಕಳೆದೊಂದು ದಶಕದಲ್ಲಿ ಭಾರತವು ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆ ಸಾಧಿಸಿದ್ದು, ₹10 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ. ಆ ಪೈಕಿ 4 ಲಕ್ಷ ಕೋಟಿ ಮೌಲ್ಯದ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಸರ್ವರ್‌ಗಳು ಹಾಗೂ ₹75,000 ಕೋಟಿ ಮೌಲ್ಯದ ಟೆಲಿಕಾಂ ಉಪಕರಣಗಳು ರಫ್ತು ಮಾಡಲಾಗಿದೆ. ರಕ್ಷಣಾ ಮತ್ತು ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಸೇರಿದಂತೆ ₹2.5 ಲಕ್ಷ ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ಸ್‌ಗಳನ್ನು ಭಾರತವು ಪ್ರಸ್ತುತ ರಫ್ತು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತವು ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಐದು ಘಟಕಗಳು ಏಕಕಾಲದಲ್ಲಿ ನಿರ್ಮಾಣ ಹಂತದಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಟ್ಯಾಲೆಂಟ್ ಪೈಪ್‌ಲೈನ್ ಅನ್ನು ಇನ್ನಷ್ಟು ಬಲಪಡಿಸಲು, ಸುಧಾರಿತ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ 85,000 ಎಂಜಿನಿಯರ್‌ಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಚಲ ಬದ್ಧತೆಯು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.
2047ರ ವಿಕಸಿತ ಭಾರತದ ಪರಿಕಲ್ಪನೆಯಡಿ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಪ್ರತಿಯೊಬ್ಬ ಭಾರತೀಯರ ಮಹಾತ್ವಾಕಾಂಕ್ಷೆಯಾಗಿದೆ. ನಮ್ಮ ಸರ್ಕಾರವು ಮೂಲಸೌಕರ್ಯ ಹೂಡಿಕೆ, ಅಂತರ್ಗತ ಬೆಳವಣಿಗೆ, ಉತ್ಪಾದನಾ ವಿಸ್ತರಣೆ ಮತ್ತು ಕಾನೂನುಗಳ ಸರಳೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.