ಛತ್ತರಪುರ: ಪ್ರಯಾಗರಾಜ್‌ದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ ಟೀಕಿಸಿ ಹೇಳಿಕೆ ನೀಡಿರುವ ಕೆಲ ನಾಯಕರ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಖಂಡಿಸಿದ್ದಾರೆ.
'ವಿದೇಶಿ ಶಕ್ತಿಗಳ ಬೆಂಬಲ ಹೊಂದಿರುವ 'ಗುಲಾಮಗಿರಿ ಮನಸ್ಥಿತಿ'ಯ ನಾಯಕರು ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಮೇಲೆ ದಾಳಿ ನಡೆಸುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.
ಛತ್ತರಪುರದಲ್ಲಿ ಶ್ರೀ ಬಾಗೇಶ್ವರ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಈ ಸಂಸ್ಥೆಯು ಕ್ಯಾನ್ಸರ್ ಆಸ್ಪತ್ರೆಯನ್ನೂ ಒಳಗೊಂಡಿದೆ. ಬಾಗೇಶ್ವರ ಧಾಮವು ಹನುಮಾನ್ ದೇವರ ಸನ್ನಿಧಾನವಾಗಿದ್ದು, ಈ ಸ್ಥಳಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಬಾಗೇಶ್ವರ ಧಾಮದ ಪೀಠಾಧೀಶ ಧೀರೇಂದ್ರ ಶಾಸ್ತ್ರಿ ಅವರು ಈ ವೈದ್ಯಕೀಯ ಕಾಲೇಜು ಹಾಗೂ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುತ್ತಿದ್ದಾರೆ.
ಪಸ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಮಹಾ ಕುಂಭ ಮೇಳವನ್ನು 'ಮೃತ್ಯು ಕುಂಭ' ಎಂದು ಕರೆದಿದ್ದರು. ಇದು ವಿವಾದಕ್ಕೆ ಈಡಾಗಿರುವ ಸಂದರ್ಭದಲ್ಲಿಯೇ ಮೋದಿ ಅವರಿಂದ ಈ ಮಾತು ಹೊರಬಿದ್ದಿದೆ.
'ಇತ್ತೀಚಿನ ದಿನಗಳಲ್ಲಿ ಕೆಲ ನಾಯಕರ ಗುಂಪು ನಮ್ಮ ಧರ್ಮವನ್ನು ಅಣಕಿಸುವುದು ಹಾಗೂ ಅಪಹಾಸ್ಯ ಮಾಡುವುದನ್ನು ನೋಡುತ್ತಿದ್ದೇವೆ. ದೇಶದ ಜನರಲ್ಲಿನ ಒಗ್ಗಟ್ಟು ಮುರಿಯುವುದೇ ಅವರ ಉದ್ದೇಶವಾಗಿದೆ' ಎಂದು ಮೋದಿ ವಾಗ್ದಾಳಿ ನಡೆಸಿದರು.
'ಇಂತಹ ಜನರನ್ನು ಬೆಂಬಲಿಸುವ ಮೂಲಕ ದೇಶ ಹಾಗೂ ನಮ್ಮ ಧರ್ಮವನ್ನು ದುರ್ಬಲಗೊಳಿಸಲು ವಿದೇಶಿ ಶಕ್ತಿಗಳು ಯತ್ನಿಸುತ್ತಿರುವುದನ್ನು ಸಹ ನೋಡಿದ್ದೇವೆ' ಎಂದರು.
ಮಹಾ ಕುಂಭ ಮೇಳದ ವೇಳೆ, ಸಫಾಯಿ ಕರ್ಮಚಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮಾಡುತ್ತಿರುವ ಕಾರ್ಯ ಶ್ಲಾಘಿಸಿದ ಮೋದಿ, 'ಈ ಬೃಹತ್ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಲು ಇವರ ಶ್ರಮ ದೊಡ್ಡದು' ಎಂದರು.
ಮಧ್ಯಪ್ರದೇಶದ ಛತ್ತರಪುರದಲ್ಲಿ ಬಾಗೇಶ್ವರ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಗೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಸಭಿಕರಿಗೆ ಕೈಮುಗಿದರು. ಬಾಗೇಶ್ವರ ಧಾಮದ ಪೀಠಾಧಿಪತಿ ಧೀರೇಂದ್ರ ಶಾಸ್ತ್ರಿ ಪಾಲ್ಗೊಂಡಿದ್ದರು -ಪಿಟಿಐ ಚಿತ್ರ
ನರೇಂದ್ರ ಮೋದಿ ಪ್ರಧಾನಿಹಿಂದೂ ನಂಬಿಕೆಗಳನ್ನು ದ್ವೇಷಿಸುವವರು ಹಲವು ಶತಮಾನಗಳಿಂದ ಬೇರೆ ಬೇರೆ ವೇಷಗಳಲ್ಲಿ ಇಲ್ಲಿ ವಾಸಿಸುತ್ತಿದ್ದಾರೆ.
ಮೋದಿ ಹೇಳಿದ್ದು...
* 'ಗುಲಾಮಗಿರಿ ಮನಸ್ಥಿತಿ' ಹೊಂದಿರುವವರು ನಮ್ಮ ನಂಬಿಕೆಗಳು ದೇವಸ್ಥಾನಗಳು ಸಂತರು ಸಂಸ್ಕೃತಿ ಮೇಲೆ ದಾಳಿ ನಡೆಸುತ್ತಿದ್ದಾರೆ
* ಈ ಜನರು ನಮ್ಮ ಹಬ್ಬಗಳು ಹಾಗೂ ಪರಂಪರೆಗಳ ನಿಂದನೆ ಮಾಡುತ್ತಿದ್ದಾರೆ
* ದೇಶದ ಏಕತೆಗೆ ಧಕ್ಕೆ ತರುವುದು ಹಾಗೂ ಸಮಾಜವನ್ನು ಒಡೆಯುವುದೇ ಇವರ ಕಾರ್ಯಸೂಚಿ
* ಮೂಲಭೂತವಾಗಿ ಪ್ರಗತಿಪರ ಆಗಿರುವ ನಮ್ಮ ಧರ್ಮ ಹಾಗೂ ಸಂಸ್ಕೃತಿಗೆ ಕೆಸರೆರಚುವ ಕಾರ್ಯವನ್ನೂ ಮಾಡುತ್ತಿದ್ದಾರೆ.