ಕಾಸರಗೋಡು: ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ, ಪದ್ಮಭೂಷಣ ಸುನೀಲ್ ಗವಾಸ್ಕರ್ ಅವರನ್ನು ಕಾಸರಗೋಡು ಜನತೆ ಶುಕ್ರವಾರ ಭವ್ಯ ಸ್ವಾಗತದೊಂದಿಗೆ ಕಾಸರಗೋಡಿನ ಮಣ್ಣಿಗೆ ಬರಮಾಡಿಕೊಂಡರು.
ಕಾಸರಗೋಡು ವಿದ್ಯಾನಗರದ ನಗರಸಬಾ ಸ್ಟೇಡಿಯಂಗೆ ತೆರಳುವ ರಸ್ತೆಗೆ ತಮ್ಮ ಹೆಸರನ್ನಿರಿಸಿದ ನಾಮಫಲಕವನ್ನು ಶುಕ್ರವಾರ ಅನಾವರಣಗೊಳಿಸುತ್ತಿದ್ದಂತೆ ಗಾವಸ್ಕರ್ ಅನುಯಾಯಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ನಗರಸಭಾ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕ್ರೀಡಾಪಟುಗಳು, ಕ್ರಿಕೆಟ್ ಅಭಿಮಾನಿಗಳು, ಊರ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ವಿದ್ಯಾನಗರ ಸ್ಟೇಡಿಯಂ ಸನಿಹದ ರಸ್ತೆಯ ನಾಮಫಲಕ ಅನಾವರಣದ ನಂತರ ಸುನಿಲ್‍ಗಾವಸ್ಕರ್ ಅವರನ್ನು ತೆರೆದ ವಾಹನದಲ್ಲಿ ಎಸ್.ಪಿ ಕಚೇರಿ ವಠಾರದ ರಾಯಲ್ ಕನ್ವೆನ್ಷನ್ ಸೆಂಟರ್‍ಗೆ ಕರೆದೊಯ್ಯಲಾಯಿತು. ನೂರಾರು ವಾಹನಗಳು ಸನುನಿಲ್‍ಗಾವಸ್ಕರ್ ವಾಹನವನ್ನು ಹಿಂಬಾಲಿಸಿ ತೆರಳಿತು. ಕ್ರಿಕೆಟ್ ದಿಗ್ಗಜನನ್ನು ಕಾಣಲು ಹಾಗೂ ಹಸ್ತಲಾಘವ ನೀಡಲು ಹಾಗೂ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದ ಜನತೆಯನ್ನು ನಿಯಂತ್ರಿಸುವಲ್ಲಿ ಪೊಲೀಸರೂ ಹರಸಾಹಸ ಪಡಬೇಕಾಯಿತು. ನಂತರ ನಗರಸಭೆ ವತಿಯಿಂದ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ಸ್ಮರಣಿಕೆ ನೀಡಿ ಗೌರವಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ, ನಗರಸಭಾ ಸದಸ್ಯೆ ಸವಿತಾ ಟೀಚರ್, ಸ್ವಾಗತ ಸಮಿತಿ ಕಾರ್ಯದರ್ಶಿ ಟಿ.ಎ ಶಾಫಿ, ಕೋಶಾಧಿಕಾರಿ ಕೆ.ಎಂ ಅಬ್ದುಲ್ ರಹಮಾನ್ ಮೊದಲಾದವರು ಪಾಲ್ಗೊಂಡಿದ್ದರು.