ಚೆನ್ನೈ: ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ಮರು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಮಿಳುನಾಡಿನಾದ್ಯಂತ ಶಿಕ್ಷಕರು ಸೇರಿದಂತೆ ಸಹಸ್ರಾರು ಸರ್ಕಾರಿ ನೌಕರರು ಮಂಗಳವಾರ ಸಾಂದರ್ಭಿಕ ರಜೆ (ಸಿ.ಎಲ್) ಹಾಕಿ ಕರ್ತವ್ಯದಿಂದ ದೂರವುಳಿದರು.
ಆಡಳಿತಾರೂಢ ಡಿಎಂಕೆ ಪಕ್ಷವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಒಪಿಎಸ್ ಮರು ಜಾರಿಗೊಳಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
ಇದು ವರ್ಷದಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ತಮಿಳುನಾಡು ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ.
ಯಾವುದೇ ರೀತಿಯ ಆಂದೋಲನ ನಡೆಸದಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದ್ದರಿಂದ ತಮಿಳುನಾಡಿನ ಸರ್ಕಾರಿ ಶಿಕ್ಷಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು (ಜೆಎಸಿಟಿಒ-ಜಿಇಒ) 'ಮೌನ ಪ್ರತಿಭಟನೆ'ಯನ್ನು ಆಶ್ರಯಿಸಿತ್ತು.
ನಾಲ್ವರು ಸಚಿವರನ್ನು ಒಳಗೊಂಡ ಸಮಿತಿ ಜತೆ ಸೋಮವಾರ ರಾತ್ರಿವರೆಗೂ ನಡೆದ ಸಭೆ ಫಲಪ್ರದವಾಗದ ಕಾರಣ, ಜೆಎಸಿಟಿಒ-ಜಿಇಒ ಸದಸ್ಯರು ರಜೆ ಹಾಕಿ ಕರ್ತವ್ಯದಿಂದ ದೂರವುಳಿಯಲು ನಿರ್ಧರಿಸಿದರು.
ರಾಜ್ಯದಾದ್ಯಂತ ತಮ್ಮ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದ ನೌಕರರು, ಒಪಿಎಸ್ ಜತೆಗೆ ನೌಕರರ ವೇತನಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಡಿಎಂಕೆ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಅದು ನೌಕರರ ಆಕ್ರೋಶ ಎದುರಿಸಬೇಕಾಗುತ್ತದೆ, ಅಲ್ಲದೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ನೌಕರರು ಎಚ್ಚರಿಸಿದರು.