ತ್ರಿಶ್ಶೂರ್: ಕೇರಳದ ತ್ರಿಶ್ಶೂರ್‌ನ ಚಾಲಕ್ಕುಡಿ ಬಳಿಯ ಪೋಟಾದ ಫೆಡರಲ್ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ಮಧ್ಯಾಹ್ನ ದರೋಡೆ ನಡೆದಿದ್ದು, ₹ 15 ಲಕ್ಷ ದೋಚಲಾಗಿದೆ.
'ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿ ಬ್ಯಾಂಕ್ ಪ್ರವೇಶಿಸಿದ ವ್ಯಕ್ತಿಯೊಬ್ಬ ಕೈಯಲ್ಲಿ ಚಾಕು ಹಿಡಿದು ಸಿಬ್ಬಂದಿಯನ್ನು ಹೆದರಿಸಿದ್ದಾನೆ.
ನಂತರ ಕೋಣೆಯೊಂದರಲ್ಲಿ ಅವರನ್ನು ಕೂಡಿ ಹಾಕಿ, ಕ್ಯಾಶ್ ಕೌಂಟರ್‌ನಲ್ಲಿದ್ದ ಹಣವನ್ನು ಲೂಟಿ ಮಾಡಿ ಪರಾರಿಯಾಗಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.
'ಬ್ಯಾಂಕಿನಲ್ಲಿ ಒಟ್ಟು ₹ 47 ಲಕ್ಷ ನಗದು ಇತ್ತು. ಈ ಪೈಕಿ ₹ 15 ಲಕ್ಷವನ್ನು ದರೋಡೆಕೋರ ದೋಚಿದ್ದಾನೆ' ಎಂದು ತ್ರಿಶ್ಶೂರ್ ಗ್ರಾಮೀಣ ಪೊಲೀಸ್ ಮುಖ್ಯಸ್ಥ ಬಿ. ಕೃಷ್ಣಕುಮಾರ್ ಮಾಹಿತಿ ನೀಡಿದ್ದಾರೆ.
'ದರೋಡೆಕೋರ ಹಿಂದಿ ಮಾತನಾಡುತ್ತಿದ್ದ ಎಂಬುದು ಗೊತ್ತಾಗಿದೆ. ಬ್ಯಾಂಕಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಆರೋಪಿ ಪತ್ತೆಗೆ ಶೋಧ ಕೈಗೊಳ್ಳಲಾಗಿದೆ' ಎಂದು ಅವರು ಹೇಳಿದ್ದಾರೆ.