ಜೆರುಸಲೇಂ: ನಾಲ್ವರು ಒತ್ತೆಯಾಳುಗಳ ಮೃತದೇಹಗಳನ್ನು ಹಸ್ತಾಂತರಿಸುವುದಕ್ಕೆ ಪ್ರತಿಯಾಗಿ, ಪ್ಯಾಲೆಸ್ಟೀನ್‌ನ ನೂರಾರು ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಪರಸ್ಪರ ಒಪ್ಪಂದಕ್ಕೆ ಬರಲಾಗಿದೆ ಎಂದು ಇಸ್ರೇಲ್ ಮತ್ತು ಹಮಾಸ್ ಅಧಿಕಾರಿಗಳು ಮಂಗಳವಾರ ತಿಳಿಸಿದರು.
ಈ ಮೂಲಕ ಕದನ ವಿರಾಮದ ಅವಧಿಯು ಇನ್ನಷ್ಟು ದಿನ ಮುಂದುವರಿಯಲಿದೆ.
ಪ್ಯಾಲೆಸ್ಟೀನ್‌ನ 600 ಕೈದಿಗಳನ್ನು ಬಿಡುಗಡೆ ಮಾಡಲು ಇಸ್ರೇಲ್ ವಿಳಂಬ ಮಾಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹಮಾಸ್ ಬಂಡುಕೋರ ಸಂಘಟನೆಯು 'ಇದು ಕದನ ವಿರಾಮ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ. ಈ ಕೈದಿಗಳನ್ನು ಬಿಡುಗಡೆ ಮಾಡುವವರೆಗೂ ಎರಡನೇ ಹಂತದ ಮಾತುಕತೆ ಅಸಾಧ್ಯ' ಎಂದು ಹೇಳಿತ್ತು.
ಮೊದಲನೇ ಹಂತದ ಕದನ ವಿರಾಮ ಒಪ್ಪಂದವು ಈ ವಾರಾಂತ್ಯದಲ್ಲಿ ಮುಕ್ತಾಯಗೊಳ್ಳಲಿದೆ. ಇಸ್ರೇಲ್ ವಿಳಂಬ ನೀತಿಯು ಎರಡನೇ ಹಂತದ ಮಾತುಕತೆಗೆ ಅಡ್ಡಿಯಾಗಿ ಪರಿಣಮಿಸಿತ್ತು.
ಸದ್ಯ ಹೊಸ ಒಪ್ಪಂದದ ಮೂಲಕ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳಲಾಗಿದೆ ಎಂದು ಹಮಾಸ್ ತಿಳಿಸಿದೆ.