ಛತ್ರಪತಿ ಸಂಭಾಜಿನಗರ : ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ವಲಸಿಗರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಶನಿವಾರ ಹೇಳಿದ್ದಾರೆ.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದ 65ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
'ಭಾರತದಲ್ಲಿ ನೆಲಸುವ ಹಕ್ಕಿಲ್ಲದೆಯೂ ಕೋಟ್ಯಂತರ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಅವರು ಇಲ್ಲಿ ತಮ್ಮ ಜೀವನೋಪಾಯ ನಡೆಸುತ್ತಿದ್ದಾರೆ. ಅವರು ನಮ್ಮ ಸಂಪನ್ಮೂಲಗಳ ಮೇಲೆ ಬೇಡಿಕೆಗಳನ್ನು ಇಡುತ್ತಿದ್ದಾರೆ. ನಮ್ಮ ಶಿಕ್ಷಣ, ಆರೋಗ್ಯ ಕ್ಷೇತ್ರ, ವಸತಿ ಕ್ಷೇತ್ರದ ಮೇಲೂ ಬೇಡಿಕೆಗಳನ್ನು ಇಡುತ್ತಿದ್ದಾರೆ. ಈಗ ಇನ್ನಷ್ಟು ಮುಂದೆ ಹೋಗಿ, ಅವರು ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನು ಎಚ್ಚರಗೊಳ್ಳಬೇಕಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ' ಎಂದು ಧನಕರ್ ಹೇಳಿದರು.
ಅಮೆರಿಕ ಸರ್ಕಾರವು ಅಕ್ರಮ ವಲಸಿಗರನ್ನು ಗಡೀಪಾರು ಮಾಡುತ್ತಿರುವುದನ್ನು ಉಲ್ಲೇಖಿಸಿದ ಅವರು, 'ನಮ್ಮ ದೇಶದಲ್ಲಿ ಈ ಪ್ರಕ್ರಿಯೆಯು ಯಾವಾಗ ಪ್ರಾರಂಭವಾಗಲಿದೆಯೆಂದು ಪ್ರತಿ ಭಾರತೀಯನೂ ಕೇಳಬೇಕು' ಎಂದು ಅವರು ಹೇಳಿದರು.