ಚೆನ್ನೈ: ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುವ ಮೂಲಕ ಭಾಷಾ ಯುದ್ಧದ ಬೀಜಗಳನ್ನು ಬಿತ್ತುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಮಂಗಳವಾರ ಆರೋಪಿಸಿದರು.
ರಾಜ್ಯವು ಯಾವುದೇ ಭಾಷೆಯ ವಿರೋಧಿ ಅಲ್ಲ. ಆದರೆ ಮಾತೃ ಭಾಷೆ ತಮಿಳನ್ನು ನಾಶ ಮಾಡಲು ಅಥವಾ ಅದರ ಮೇಲೆ ದಬ್ಬಾಳಿಕೆ ನಡೆಸಲು ಬೇರೆ ಯಾವುದೇ ಭಾಷೆಗೆ ಅವಕಾಶ ನೀಡುವುದಿಲ್ಲ ಎಂದು ಕಟುವಾಗಿ ಹೇಳಿದರು.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಇದೇ ಕಾರಣಕ್ಕಾಗಿ ರಾಜ್ಯವು ದ್ವಿಭಾಷಾ ನೀತಿಯನ್ನು (ತಮಿಳು, ಇಂಗ್ಲಿಷ್) ಅಳವಡಿಸಿಕೊಂಡಿದೆ' ಎಂದು ತಿಳಿಸಿದರು.
ಹಿಂದಿ ಭಾಷೆಯ ದಬ್ಬಾಳಿಕೆ ಅಂತ್ಯವಾಗುವವರೆಗೂ ಹೋರಾಟ ಮುಂದುವರಿಯಲಿದೆ. 1965ರಿಂದ ಸಾಕಷ್ಟು ತ್ಯಾಗಗಳ ಮೂಲಕ ಡಿಎಂಕೆಯು ಮಾತೃ ಭಾಷೆಯನ್ನು ರಕ್ಷಿಸುತ್ತಿದೆ. 1971ರಲ್ಲಿ ಡಿಎಂಕೆ ವಿದ್ಯಾರ್ಥಿಗಳು ಹಿಂದಿ ವಿರೋಧಿ ಸಮಾವೇಶವನ್ನು ಏರ್ಪಡಿಸಿದ್ದರು ಎಂದು ಹೇಳುವ ಮೂಲಕ ಯಾವುದೇ ತ್ಯಾಗಕ್ಕೂ ತಾವು ಸಿದ್ಧ ಎಂದು ಸೂಚ್ಯವಾಗಿ ತಿಳಿಸಿದರು.
ದಬ್ಬಾಳಿಕೆಯನ್ನು ವಿರೋಧಿಸುವ ಮತ್ತು ಮಾತೃ ಭಾಷೆಯನ್ನು ರಕ್ಷಿಸುವ ಗುಣ ಡಿಎಂಕೆ ಸದಸ್ಯರ ರಕ್ತದಲ್ಲಿಯೇ ಇದೆ. ನನ್ನ ಜೀವನದ ಅಂತ್ಯದವರೆಗೂ ಈ ಗುಣವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.