ತಿರುವನಂತಪುರ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗಿದ್ದರೂ ಕೇರಳದ ಕಾಂಗ್ರೆಸ್ ನಾಯಕರು, ತರೂರ್ ಪರವಾಗಿ ಮೃದು ಧೋರಣೆ ತಾಳಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, 'ಟೀಕೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಪಕ್ಷವು ಯಾರನ್ನೂ ಮೂಲೆಗುಂಪು ಮಾಡುವುದಿಲ್ಲ.
ಕಾಂಗ್ರೆಸ್ ಪಕ್ಷವು ಟೀಕೆಗಳನ್ನು ಧನಾತ್ಮಕವಾಗಿ ಪರಿಗಣಿಸುತ್ತದೆ' ಎಂದು ಹೇಳಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಚೆನ್ನಿತ್ತಲ ಅವರು, 'ತರೂರ್ ಅವರು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಉನ್ನತ ನಾಯಕರನ್ನು ಭೇಟಿ ಮಾಡುವ ಮುನ್ನವೇ ಸಂದರ್ಶನ ನಡೆದಿತ್ತು' ಎಂದು ಸಮರ್ಥಿಸಿಕೊಂಡಿದ್ದಾರೆ.
ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸುಧಾಕರನ್ ಅವರು, 'ತರೂರ್ ಅವರು ತಮ್ಮ ಮಿತಿಯನ್ನು ಮೀರುವುದಿಲ್ಲ' ಎಂದು ಭಾವಿಸುತ್ತೇನೆ ಎಂದಿದ್ದಾರೆ.
ತರೂರ್ ಅವರ ಹೇಳಿಕೆಯನ್ನು ನಿರ್ಲಕ್ಷಿಸಲು ಅಥವಾ ತರೂರ್ ಅವರಿಗೆ ಪುನಃ ಪ್ರಚೋದನೆ ನೀಡದಿರಲು ರಾಜ್ಯದ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ತರೂರ್ ಅವರ ವಿರುದ್ಧದ ಯಾವುದೇ ರೀತಿಯ ಕ್ರಮವು ಗಾಯದ ಮೇಲೆ ಉಪ್ಪು ಸುರಿದಂತೆ ಆಗುತ್ತದೆ. ಹೀಗಾಗಿ ಪಕ್ಷವು ತಟಸ್ಥ ಧೋರಣೆ ತಾಳಿದೆ ಎಂದು ಮೂಲಗಳು ತಿಳಿಸಿವೆ.
ಕೇರಳದ ಕಾಂಗ್ರೆಸ್ ಘಟಕದಲ್ಲಿ 'ನಾಯಕರ ಕೊರತೆ ಇದೆ' ಎಂದು ತರೂರ್ ಅವರು ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು.