ಪ್ಯಾರಿಸ್: ಎರಡು ದಿನಗಳ ಫ್ರಾನ್ಸ್ ಪ್ರವಾಸ ಅಂತ್ಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಬುಧವಾರ ಅಮೆರಿಕಕ್ಕೆ ತೆರಳಿದ್ದಾರೆ.
ಮಂಗಳವಾರ ಫ್ರಾನ್ಸ್‌ಗೆ ತೆರಳಿದ್ದ ಮೋದಿ ಅವರು ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರ ಜೊತೆಗೂಡಿ 'ಎ.ಐ ಆಯಕ್ಷನ್ ಶೃಂಗ'ದಲ್ಲಿ ಭಾಗವಹಿಸಿದ್ದರು.
ಬಂದರು ನಗರಿ ಮಾರ್ಸೆಲ್‌ಗೆ ಭೇಟಿ ನೀಡಿ ವಿ.ಡಿ. ಸಾರ್ವಕರ್ ಅವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದರು.
ಇಂದು ನಡೆದ ಭಾರತ-ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಮಾತುಕತೆ ಸಂದರ್ಭ ಉಭಯ ದೇಶಗಳ ವ್ಯಾಪಾರ, ಹೂಡಿಕೆ ಸಂಬಂಧಗಳನ್ನು ವೃದ್ಧಿಸುವ ಬಗ್ಗೆ ಚರ್ಚಿಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಒಪ್ಪಂದಕ್ಕೆ ಬಂದಿದ್ದಾರೆ.
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಈ ವೇಳೆ ಭಾರತದ ವಲಸಿಗರ ಗಡೀಪಾರು ಸೇರಿದಂತೆ ಅನೇಕ ವಿಷಯಗಳನ್ನು ಉಭಯ ನಾಯಕರು ಚರ್ಚಿಸಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರನ್ನು ಭೇಟಿ ಮಾಡಿದ ನಾಲ್ಕನೇ ವಿದೇಶಿ ನಾಯಕ ಮೋದಿ ಅವರಾಗಲಿದ್ದಾರೆ.