ಬರ್ಧಮಾನ್ : 'ಹಿಂದೂ ಸಮಾಜವು ದೇಶದ ಜವಾಬ್ದಾರಿಯುತ ಸಮುದಾಯ. ಈ ಸಮಾಜ ಏಕತೆಯನ್ನು ವೈವಿಧ್ಯತೆಯ ಮೂರ್ತರೂಪ ಎಂದು ಭಾವಿಸಿದೆ. ಹೀಗಾಗಿ ದೇಶದ ಹಿಂದೂಗಳನ್ನು ಒಗ್ಗೂಡಿಸುವುದು ಅತ್ಯಂತ ಮಹತ್ವದ್ದಾಗಿದೆ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಜನರು ಪದೇಪದೇ ನನ್ನನ್ನು ನಾವೇಕೆ ಹಿಂದೂ ಸಮಾಜದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಕೇಳುತ್ತಾರೆ. ಅದಕ್ಕೆ ನನ್ನ ಉತ್ತರ ಇಷ್ಟೇ, ದೇಶದ ಅತ್ಯಂತ ಜವಾಬ್ದಾರಿಯುತ ಸಮಾಜವೆಂದರೆ ಹಿಂದೂ ಸಮಾಜ' ಎಂದು ಪ್ರತಿಪಾದಿಸಿದರು.
'ಭರತವರ್ಷ ಎನ್ನುವುದು ಕೇವಲ ಭೌಗೋಳಿಕ ಅಸ್ತಿತ್ವವಲ್ಲ. ಕಾಲ ಕಾಲಕ್ಕೆ ಅದರ ಗಾತ್ರ ವಿಸ್ತರಿಸುತ್ತಾ ಮತ್ತು ಕುಗ್ಗುತ್ತಾ ಹೋಗುತ್ತದೆ. ಇಲ್ಲಿ ಸಾಮರಸ್ಯದಿಂದ ಬದುಕಲು ಬಯಸದವರು ತಮ್ಮದೇ ದೇಶ ಕಟ್ಟಿಕೊಂಡರು' ಎಂದು ಹೇಳಿದರು.
'ನಾವು ಏಕತೆಯಲ್ಲಿ ವೈವಿಧ್ಯತೆ ಎನ್ನುತ್ತೇವೆ. ಆದರೆ, ಹಿಂದೂ ಸಮಾಜವು ವೈವಿಧ್ಯತೆಯೇ ಏಕತೆ ಎಂದು ಭಾವಿಸಿದೆ'. ಒಳ್ಳೆಯ ಸಮಯದಲ್ಲೂ ಸವಾಲುಗಳು ಉದ್ಭವಿಸುತ್ತವೆ. ಅವುಗಳನ್ನು ಎದುರಿಸಲು ನಾವೆಷ್ಟು ತಯಾರಾಗಿದ್ದೇವೆ ಎನ್ನುವುದು ಮುಖ್ಯ' ಎಂದು ಭಾಗವತ್ ಹೇಳಿದರು.
ಬರ್ಧಮಾನ್‌ನ ಸಾಯಿ ಮೈದಾನದಲ್ಲಿ ಆರ್‌ಎಸ್‌ಎಸ್ ರ್‍ಯಾಲಿಗೆ ಪಶ್ಚಿಮ ಬಂಗಾಳ ಪೊಲೀಸರು ಅನುಮತಿ ನಿರಾಕರಿಸಿದ್ದರು. ನಂತರ ಕೋಲ್ಕತ್ತ ಹೈಕೋರ್ಟ್ ಅನುಮತಿ ನೀಡಿದ ಬಳಿಕ ರ‍್ಯಾಲಿ ಆಯೋಜಿಸಲಾಗಿತ್ತು.