ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಉತ್ತರಿಸಿರುವ ಚುನಾವಣಾ ಆಯೋಗ, ವಾಸ್ತವಾಂಶದೊಂದಿಗೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದೆ.
ಚುನಾವಣಾ ಆಯೋಗದಿಂದ ವರದಿಯನ್ನು ಕೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ ವಯಸ್ಕ ಜನಸಂಖ್ಯೆಗಿಂತ ಹೆಚ್ಚಿನ ಮತದಾರರಿದ್ದಾರೆ ಎಂದು ಆರೋಪಿಸಿದ್ದರು.
ರಾಜಕೀಯ ಪಕ್ಷಗಳಿಂದ ಬರುವ ಪ್ರಶ್ನೆಗಳನ್ನು ಚುನಾವಣಾ ಆಯೋಗವು ಗೌರವಿಸುತ್ತದೆ. ಸಂಪೂರ್ಣ ವಾಸ್ತವ ಮತ್ತು ನಿಜಾಂಶದೊಂದಿಗೆ ಲಿಖಿತ ರೂಪದಲ್ಲಿ ಉತ್ತರ ನೀಡುವುದಾಗಿ ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೇ ಆಯೋಗವು ತಿಳಿಸಿದೆ.
ಮಹಾರಾಷ್ಟ್ರ ಚುನಾವಣಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸಾಲು ಸಾಲು ಪ್ರಶ್ನೆ ಮಾಡಿದ್ದರು. ಮಹಾರಾಷ್ಟ್ರದಲ್ಲಿ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ಮತದಾರರಿದ್ದಾರೆ ಎಂದು ಆರೋಪಿಸಿದ್ದರು.
ಸರ್ಕಾರದ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರದ ವಯಸ್ಕ ಜನಸಂಖ್ಯೆ 9.54 ಕೋಟಿಯಷ್ಟಿದ್ದರೆ, ರಾಜ್ಯದಲ್ಲಿ 9.7 ಕೋಟಿ ಮತದಾರರಿದ್ದಾರೆ ಎಂದು ಅವರು ಆರೋಪಿಸಿದ್ದರು.
ಮಹಾರಾಷ್ಟ್ರದಲ್ಲಿ ಕಳೆದ ಐದು ವರ್ಷಗಳಲ್ಲಿ 32 ಲಕ್ಷ ಮತದಾರರು ಸೇರ್ಪಡೆಯಾಗಿದ್ದರೆ, ಲೋಕಸಭೆ ಚುನಾವಣೆಯ ಬಳಿಕ ಕಳೆದ ಐದು ತಿಂಗಳಲ್ಲಿ 39 ಲಕ್ಷ ಮತದಾರರು ಸೇರ್ಪಡೆಯಾಗಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ ವರ್ಷಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಭಾರಿ ಗೆಲುವು ಸಾಧಿಸಿತ್ತು.