ತಿರುವನಂತಪುರಂ: ಕೇರಳದ ಬಾಲಕನೊಬ್ಬ ತನ್ನ ಅಮ್ಮನಿಗೆ ''ಅಮ್ಮ ನಮ್ಮ ಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್ ಫ್ರೈ ಕೊಡೊಕೆ ಹೇಳಮ್ಮ'' ಎಂದು ಕೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಎರ್ನಾಕುಲಂನ 'ಶಂಕು' ಎಂದು ಕರೆಯುವ ರಿಜುಲ್ ಎಸ್ ಸುಂದರ್ ಎಂಬ ನಾಲ್ಕು ವರ್ಷದ ಬಾಲಕನೇ ಅಂಗನವಾಡಿಯಲ್ಲಿ ಬಿರಿಯಾನಿ ಕೊಡುವುದಕ್ಕೆ ಕೇಳಿದವನು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು, ಮಗುವಿನ ಮುಗ್ದತೆಗೆ ನನಗೆ ತುಂಬಾ ಸಂತೋಷ ತರಿಸಿದೆ. ಈಗಾಗಲೇ ನಾವು ಅಂಗನವಾಡಿಗಳಲ್ಲಿ ಪೌಷ್ಟಿಕಾಂಶದ ಮೊಟ್ಟೆ, ಬಾಳೆಹಣ್ಣು, ಹಾಲು ವಿತರಣೆ ಮಾಡುತ್ತಿದ್ದೇವೆ. ಅದರ ಜೊತೆ ಧಾನ್ಯಗಳ ಆಹಾರವನ್ನು ನೀಡುತ್ತಿದ್ದೇವೆ. ಶಂಕು ಇಟ್ಟಿರುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಶಂಕು ಕೇಳಿದ ನಂತರ ಅಂಗನವಾಡಿ ಫುಡ್ ಮೆನುಗಳನ್ನು ನಾವು ಪುನರ್ ಪರಿಶೀಲಿಸಬೇಕಾಗಿದೆ ಎಂದು ವೀಣಾ ಅವರು ನಗುತ್ತಾ ಹೇಳಿದ್ದಾರೆ.
ಶಂಕು ಕೇಳಿದ ಪ್ರಶ್ನೆಯು ಕೇರಳದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗೂ ಕಾರಣವಾಗಿದೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಚಿವೆ ವೀಣಾ ಜಾರ್ಜ್ ಅವರು ವಿಡಿಯೊ ಹಂಚಿಕೊಂಡಿದ್ದಾರೆ.