ಮಂಜೇಶ್ವರ: ಕೇರಳದ ಎಡರಂಗ ಸರ್ಕಾರದ ಬಜೆಟ್ ಬೋಗಸ್ ಪತ್ರವಾಗಿದ್ದು, ಯಾವುದೇ ಜನೋಪಕಾರಿ ಸಲಹೆಗಳಿಲ್ಲದ ಕರಪತ್ರದಂತಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಉಮ್ಮರ್ ಬೋರ್ಕಳ ಆರೋಪಿಸಿದ್ದಾರೆ.
ಸಾಧ್ಯವಾಗುವ ಎಲ್ಲಾ ಹಾದಿಗಳಿಂದಲೂ ತೆರಿಗೆ ವಸೂಲಿ ಮಾಡುವುದನ್ನೇ ನಿತ್ಯ ಕಾಯಕವನ್ನಾಗಿಸಿದ ಸರ್ಕಾರ ಕಚೇರಿಗಳಲ್ಲಿ ಅಗತ್ಯ ಉದ್ಯೋಗಿಗಳನ್ನು ನೇಮಿಸಲು ಮೀನ ಮೇಷ ಎಣಿಸುತ್ತಿದೆ. ಬಿಲ್ಡಿಂಗ್ ಪರ್ಮಿಟ್ ಹೆಸರಲ್ಲಿ ಜನರನ್ನು ಅಕ್ಷರಶ: ಲೂಟಿ ಮಾಡಲಾಗುತ್ತಿದೆ. ಶುಚಿತ್ವ ಮಾಲಿನ್ಯ ನಿಯಂತ್ರಣ ಸಂಪೂರ್ಣ ಹೆಸರಲ್ಲೂ ಭಾರೀ ದಂಡ ವಿಧಿಸಿ ಖಜಾನೆ ತುಂಬಿಸುವ ಕೆಲಸ ಮಾಡುವ ಸರ್ಕಾರ ಮಾಲಿನ್ಯ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಜನರು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿರುವಾಗ ಮುಖ್ಯಮಂತ್ರಿ ಹಾಗೂ ಸಚಿವರುಗಳು ದುಂದುವೆಚ್ಚದಲ್ಲಿ ನಿರತರಾಗಿದ್ದಾರೆ. ಈ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ಚಾಲ್ತಿಯಲ್ಲಿಟ್ಟಿದೆ ಎಂದು ಅವರು ಹೇಳಿದರು.
ಕೇರಳ ಸರ್ಕಾರದ ಜನವಿರೋಧಿ ಬಜೆಟ್ ನಿರ್ದೇಶನ ಹಾಗೂ ಭೂ ತೆರಿಗೆ ಹೆಚ್ಚಳ ಪ್ರತಿಭಟಿಸಿ ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ವರ್ಕಾಡಿ ಗ್ರಾಮ ಕಚೇರಿ ಮುಂಭಾಗದಲ್ಲಿ ಇತ್ತೀಚೆಗೆ ನಡೆಸಲಾದ ಪ್ರತಿಭಟನಾ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷೋತ್ತಮ ಅರಿಬೈಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾರರಾದ ಮುಹಮ್ಮದ್ ಮಜಾಲ್, ಖಲೀಲ್ ಬಜಾಲ್, ಗಣೇಶ್ ಪಾವೂರು, ಎಸ್.ಅಬ್ದುಲ್ ಖಾದರ್ ಹಾಜಿ, ಶಾಂತಾ ಆರ್.ನಾಯ್ಕ್, ಮೂಸಾ ಡಿ.ಕೆ, ವಸಂತರಾಜ್ ಶೆಟ್ಟಿ, ರಾಬಿಯಾ, ಶೀನ ಕೆದುಂಬಾಡಿ, ವಿನೋದ್ ಪಾವೂರು, ಚಂದ್ರಶೇಖರ್ ಅರಿಬೈಲ್, ಬಾಸಿತ್ ತಲೆಕ್ಕಿ, ಅಶ್ರಫ್ ಕೆ.ಕೆ, ಹಮೀದ್ ಕಣಿಯೂರು, ಸಲೀಂ ಒಡಿಪ್ರಕೋಡಿ, ಖಾಲಿದ್ ಆನೆಕಲ್ಲು, ಶರೀಫ್ ಪಾಲೆಂಗ್ರಿ, ಅಬೂಸ್ವಾಲಿ, ಅಬೂಬಕ್ಕರ್ ಕೆ.ಎಚ್, ಹಮೀದ್, ಮುಸ್ತಫಾ ವೇದೋಡಿ, ಉಮ್ಮರ್ ಪಾಲೆಂಗ್ರಿ, ಜನಾರ್ದನ ಶೆಟ್ಟಿಗಾರ್, ಸಲಾಂ ಮಾಂಕೋಡಿ, ಐತಪ್ಪ ನೀರೊಳಿಕೆ, ನೌಷಾದ್ ಕೆದಕ್ಕಾರ್, ಮಹಮೂದ್ ಅಣೆ, ಮೊಯ್ದಿನ್ ಕುಂಞÂ ಕೋಟೆಮಾರ್, ಹಸನ್ ಒಡಿಪ್ರಕೋಡಿ, ಮೂಸಾ ಅರಿಬೈಲ್ ಮುಂತಾದವರು ಉಪಸ್ಥಿತರಿದ್ದರು. ಎ.ಎಂ. ಉಮ್ಮರ್ ಕುಂಞÂ ಸ್ವಾಗತಿಸಿ, ಸದಾಶಿವ ಕೆ. ವಂದಿಸಿದರು.