ಮಹಾಕುಂಭ ನಗರ: ಧಾರ್ಮಿಕ ದೇಣಿಗೆ ವಿಚಾರದಲ್ಲಿ ಎಲ್ಲ ಧರ್ಮದವರಿಗೂ ಅನ್ವಯವಾಗುವ ಏಕರೂಪದ ಕಾನೂನು ಜಾರಿಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ಭಾನುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಲ್ಲಿ ನಡೆದ ವಿಎಚ್‌ಪಿಯ ಮೂರು ದಿನಗಳ ಸಭೆ ಬಳಿಕ ಮಾತನಾಡಿದ ಅವರು, ಧಾರ್ಮಿಕ ದೇಣಿಗೆಗೆ ಪ್ರತ್ಯೇಕ ಕಾನೂನುಗಳ ಅಸ್ವಿತ್ವವನ್ನು ಪ್ರಶ್ನಿಸಿದರು.
'ಮುಸ್ಲಿಮರು ಅಲ್ಲಾಹನಿಗೆ ಭೂಮಿಯನ್ನು ದಾನ ಮಾಡಿದಾಗ ಅದು ವಕ್ಫ್ ಆಸ್ತಿಯಾಗುತ್ತದೆ. ಆದರೆ ಹಿಂದೂಗಳು ದೇವಾಲಯಗಳಿಗೆ, ಕ್ರೈಸ್ತರು ಚರ್ಚ್‌ಗಳಿಗೆ ಅಥವಾ ಸಿಖ್ಖರು ಗುರುದ್ವಾರಗಳಿಗೆ ದಾನ ಮಾಡಿದಾಗ ಏನಾಗುತ್ತದೆ? ದೇಣಿಗೆಗೆ ಸಂಬಂಧಿಸಿದಂತೆ ವಿವಿಧ ಧರ್ಮಗಳಿಗೆ ಭಿನ್ನ ಕಾನೂನುಗಳು ಇರುವುದು ಏಕೆ' ಎಂದು ಕೇಳಿದರು.
1954ರ ವಕ್ಫ್ ಕಾಯ್ದೆಯನ್ನು ಉಲ್ಲೇಖಿಸಿ, 'ಧಾರ್ಮಿಕ ದೇಣಿಗೆಗೆ ಸಂಬಂಧಿಸಿದಂತೆ ಮುಸ್ಲಿಮರು ಪ್ರತ್ಯೇಕ ಕಾನೂನು ಹೊಂದುವುದನ್ನು ಕಾಂಗ್ರೆಸ್‌ನ ಇಬ್ಬರು ರಾಜ್ಯಸಭಾ ಸದಸ್ಯರು ಅಂದಿನ ಕಾನೂನು ಸಚಿವರನ್ನು ಪ್ರಶ್ನಿಸಿದ್ದರು. ಏಕರೂಪದ ಕಾನೂನು ಜಾರಿಗೊಳಿಸುವುದನ್ನು ಪರಿಗಣಿಸುವುದಾಗಿ ಸಚಿವರು ಆಗ ಹೇಳಿದ್ದರು. ಅಂತಹ ಕಾನೂನು ಜಾರಿಗೆ ಇದೀಗ ಕಾಲ ಕೂಡಿಬಂದಿದೆ' ಎಂದು ತಿಳಿಸಿದರು.
ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸುವಂತೆ ಕೆಲವರು ಆಗ್ರಹಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್, 'ಭಾರತವು ಈಗಾಗಲೇ ಹಿಂದೂ ರಾಷ್ಟ್ರವಾಗಿರುವುದರಿಂದ ಅಂತಹ ಘೋಷಣೆಯ ಅಗತ್ಯವಿಲ್ಲ. ನಾವು ಧರ್ಮದ ಆಧಾರದಲ್ಲಿ ಸಂವಿಧಾನವನ್ನು ಹೊಂದಿರುವ ದೇಶವನ್ನು ಬಯಸುವುದಿಲ್ಲ' ಎಂದರು.