'2 ಸಾವಿರ ಮಂದಿ ಮೃತಪಟ್ಟಿದ್ದಾರೆ'
'4-5 ದಿನಗಳ ಹಿಂದೆ ಕಾಲ್ತುಳಿತದ ಘಟನೆ ನಡೆದಾಗ, ಇದೊಂದು ವದಂತಿ ಎನ್ನಲಾಗಿತ್ತು. ಆಮೇಲೆ, 30 ಜನ ಮೃತಪಟ್ಟಿದ್ದರು. ಇದು ಸಾವಿನ ನಿಖರವಾದ ಸಂಖ್ಯೆಯೇ? ಮುಚ್ಚಿಡಬೇಡಿ... ಒಬ್ಬ ವ್ಯಕ್ತಿ ಮೃತಪಟ್ಟರೂ ಅದು ನಮ್ಮದೇ ಜವಾಬ್ದಾರಿ... ನಾವೇ ನಮ್ಮ ಕಣ್ಣಾರೆ ಕಂಡಿದ್ದೇವೆ, ಸುಮಾರು 2 ಸಾವಿರ ಜನರು ಮೃತಪಟ್ಟಿದ್ದಾರೆ. ಕಾಲ್ತುಳಿತದ ಘಟನೆಯನ್ನು ಸೂಕ್ತ ರೀತಿಯಲ್ಲಿ ಸರ್ಕಾರ ನಿರ್ವಹಿಸಲಿಲ್ಲ. ಇದನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ. ಬೇರೆ ದೇಶಗಳಲ್ಲಿ ಇಂಥ ಘಟನೆ ನಡೆದಿದ್ದರೆ, ಪ್ರಧಾನಿ ಸೇರಿ ಮುಖ್ಯಮಂತ್ರಿಯ ರಾಜೀನಾಮೆಗಾಗಿ ದೊಡ್ಡ ಆಗ್ರಹವೇ
ಮಾಡಲಾಗುತ್ತಿತ್ತು.
- ಸಂಜಯ್ ರಾವುತ್, ಸಂಸದ
(ಸಂಜಯ್ ರಾವುತ್ ಅವರ ಈ ಹೇಳಿಕೆಯಿಂದ ರಾಜ್ಯಸಭೆಯಲ್ಲಿ ಗದ್ದಲ ಉಂಟಾಯಿತು. ತಮ್ಮ ಹೇಳಿಕೆಯನ್ನು ಸಾಬೀತು ಮಾಡುವಂತೆ ರಾವುತ್ ಅವರಿಗೆ ಉಪಸಭಾಪತಿ ಆದೇಶ ನೀಡಿದರು. 'ನನ್ನ ಹೇಳಿಕೆಯ ಕುರಿತು ದಾಖಲೆ ನೀಡುತ್ತೇನೆ' ಎಂದು ರಾವುತ್ ಹೇಳಿದರು)
'ಅದೇನು ದೊಡ್ಡ ಘಟನೆಯಲ್ಲ'
ನಾವೆಲ್ಲರೂ ಕುಂಭಮೇಳಕ್ಕೆ ಹೋಗಿದ್ದೇವೆ. ಪವಿತ್ರ ಸ್ನಾನವು ಸುಸೂತ್ರವಾಗಿಯೇ ನಡೆಯಿತು. ಎಲ್ಲವನ್ನೂ ಬಹಳ ಚೆನ್ನಾಗಿ ವ್ಯವಸ್ಥೆ ಮಾಡಲಾಗಿದೆ. ಕಾಲ್ತುಳಿತ ಘಟನೆ ನಡೆದದ್ದು ಹೌದು. ಅದು ಬಹಳ ದೊಡ್ಡ ಘಟನೆ ಏನಲ್ಲ. ಎಷ್ಟು ದೊಡ್ಡ ಘಟನೆಯೆಂದು ನನಗೇನು ಗೊತ್ತಿಲ್ಲ. ಆದರೆ, ಘಟನೆಯನ್ನು ಉತ್ಪ್ರೇಕ್ಷೆ ಮಾಡಿ ಹೇಳಲಾಗುತ್ತಿದೆ. ಎಷ್ಟೊಂದು ಜನರು ಬರುತ್ತಿದ್ದಾರೆ, ಇಷ್ಟೆಲ್ಲಾ ಜನರನ್ನು ನಿರ್ವಹಿಸುವುದು ಕಷ್ಟದ ಕೆಲಸ. ಆದರೆ, ನಾವು ಇದನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದೇವೆ.
- ಹೇಮಾ ಮಾಲಿನಿ, ಸಂಸದೆ
'ಜೆಸಿಬಿ ಮೂಲಕ ಶವ ಸಾಗಾಟ'
ನೆಲದ ತುಂಬೆಲ್ಲಾ ಬಿದ್ದಿದ್ದ ಮೃತದೇಹಗಳನ್ನು, ಬಟ್ಟೆ ಹಾಗೂ ಚಪ್ಪಲಿಗಳ ರಾಶಿಯನ್ನು ಉತ್ತರ ಪ್ರದೇಶ ಸರ್ಕಾರವು ಜೆಸಿಬಿ ಮತ್ತು ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಸಾಗಿಸಿತು. ಜನರು ಇಲ್ಲಿಗೆ 'ಪುಣ್ಯ' ಸಂಪಾದಿಸಲು ಬರುತ್ತಾರೆ. ಆದರೆ, ತಮ್ಮ ಪ್ರೀತಿಪಾತ್ರರ ಮೃತದೇಹಗಳು ಸಿಗದೇ, ದೇಹಗಳನ್ನು ಇಲ್ಲಿಯೇ ಬಿಟ್ಟು ತಾವು ಊರಿಗೆ ಮರಳುವ ಒತ್ತಡವನ್ನು ಸರ್ಕಾರ ನಿರ್ಮಾಣ ಮಾಡಿತು.
ಚಮತ್ಕಾರ ನೋಡಿ, ಸರ್ಕಾರಕ್ಕೆ ಮೃತದೇಹಗಳು ಸಿಕ್ಕಿವೆ. ಆದರೆ, ಅದರ ಲೆಕ್ಕವನ್ನು ಮಾತ್ರ ಕೊಡುತ್ತಿಲ್ಲ. ನಾವು ಡಿಜಿಟಲ್ ಮಹಾಕುಂಭ ಮೇಳವನ್ನು ಆಯೋಜಿಸಿದ್ದೇವೆ ಎನ್ನುತ್ತದೆ. ಆದರೆ, ಸತ್ತವರ ಲೆಕ್ಕ ನೀಡುವುದಿಲ್ಲ. ಬಜೆಟ್‌ನಲ್ಲಿನ ಸಂಖ್ಯೆಗಳನ್ನು ಕೇಂದ್ರ ಸರ್ಕಾರ ಪುಂಖಾನುಪುಂಖವಾಗಿ ಹೇಳುತ್ತದೆ. ಆದರೆ, ಸಾವಿನ ಸಂಖ್ಯೆಯನ್ನು ಮಾತ್ರ ನೀಡುವುದಿಲ್ಲ.
ಉತ್ತರ ಪ್ರದೇಶ ಸರ್ಕಾರವು ಸಾವಿನ ನಿಖರ ಸಂಖ್ಯೆಯನ್ನು ಮುಚ್ಚಿಡುತ್ತಿದೆ. ಕಾಲ್ತುಳಿತದಂಥ ಘಟನೆಗಳಾಗುವುದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕುಂಭಮೇಳದ ವಿಪತ್ತು ನಿರ್ವಹಣೆಯನ್ನು ಮತ್ತು ಕಳೆದು ಹೋದವರ ಪತ್ತೆಗಾಗಿ ಸ್ಥಾಪಿಸಲಾಗಿರುವ ಕೇಂದ್ರಗಳ ಜವಾಬ್ದಾರಿಯನ್ನು ಸೇನೆಗೆ ವಹಿಸಬೇಕು.
ಸಾವಿನ ಸಂಖ್ಯೆ ಎಷ್ಟು, ಎಷ್ಟು ಜನರಿಗೆ ಗಾಯಗಳಾಗಿವೆ. ಮೇಳದಲ್ಲಿನ ಔಷಧೋಪಚಾರದ ಲಭ್ಯತೆಯ ಮಾಹಿತಿ, ವೈದರ ಸಂಖ್ಯೆ, ಆಹಾರ, ನೀರು, ಸಂಚಾರಕ್ಕೆ ಮಾಡಿದ ವ್ಯವಸ್ಥೆ ಏನು... ಹೀಗೆ ಎಲ್ಲ ಮಾಹಿತಿಗಳನ್ನು ಕೇಂದ್ರ ಸರ್ಕಾರವು ಸಂಸತ್ತಿನ ಮುಂದಿಡಬೇಕು. ಘಟನೆಯ ಬಗ್ಗೆ ಸರ್ವ ಪಕ್ಷದ ಸಭೆ ಕರೆಯಬೇಕು.
'ಶಾಹಿ ಸ್ನಾನ' ಮಾಡದಂತೆ ಉತ್ತರ ಪ್ರದೇಶ ಸರ್ಕಾರವು ಸನ್ಯಾಸಿಗಳಲ್ಲಿ ಮನವಿ ಮಾಡಿತು. ಹೀಗೆ ಮಾಡುವುದರ ಮೂಲಕ ಸನಾತನ ಧರ್ಮದ ಸಂಪ್ರದಾಯಗಳನ್ನು ಗಾಳಿಗೆ ತೂರಿತು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾದ ಬಳಿಕ ಶಾಹಿ ಸ್ನಾನಕ್ಕೆ ಅವಕಾಶ ಮಾಡಿಕೊಟ್ಟಿತು. ಶವಾಗಾರದಲ್ಲಿ ಹೆಣಗಳನ್ನು ಇಟ್ಟುಕೊಂಡು, ಕುಂಭಮೇಳಕ್ಕೆ ಹೆಲಿಕಾಪ್ಟರ್‌ನಲ್ಲಿ ಹೂಮಳೆಗರೆಯಲಾಯಿತು. ಇದೆಂಥ ಸನಾತನ ಪರಂಪರೆ?
ಉತ್ತರ ಪ್ರದೇಶದ ಮುಖ್ಯಮಂತ್ರಿ ಅವರಂತು ಘಟನೆ ಕುರಿತು ಸಂತಾಪವನ್ನೂ ಸೂಚಿಸಲಿಲ್ಲ. ರಾಷ್ಟ್ರಪತಿ ಹಾಗೂ ಪ್ರಧಾನಿ ಅವರು ಸಂತಾಪ ಸೂಚಿಸಿದ ಬಳಿಕ, ಘಟನೆ ನಡೆದ 17 ತಾಸುಗಳ ನಂತರ ಮುಖ್ಯಮಂತ್ರಿ ಸಂತಾಪ ಸೂಚಿಸಿದರು.
- ಅಖಿಲೇಶ್ ಯಾದವ್, ಸಂಸದ, ಸಮಾಜವಾದಿ ಪಕ್ಷದ ಮುಖ್ಯಸ್ಥ
'ದುಡ್ಡಿರುವವರು ಹೋಗಿ ಮುಳುಗಿ, ಮೋಕ್ಷ ಪಡೆಯಿರಿ'
'ನಾನು ಆ 'ಬಾಬಾ'ನ ಹೆಸರು ಹೇಳುವುದಿಲ್ಲ. ಆದರೆ, ಅವರೊಂದು ಹೇಳಿಕೆ ನೀಡಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟವರು 'ಮೋಕ್ಷ' ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ, ದೇಶದಲ್ಲಿರುವ 'ಬಾಬಾ'ಗಳು, ರಾಜಕಾರಣಿಗಳು, ಹೆಚ್ಚು ಹೆಚ್ಚು ದುಡ್ಡಿರುವವರು ಮೋಕ್ಷ ಪಡೆಯುವುದಕ್ಕಾಗಿ ತ್ರಿವೇಣಿ ಸಂಗಮಕ್ಕೆ ಹೋಗಿ ಮುಳುಗಿ.
ನೆಹರೂ ಅವರ ಕಾಲಘಟ್ಟದಲ್ಲಿಯೂ ಕಾಲ್ತುಳಿತ ಸಂಭವಿಸಿತ್ತು. ಆದರೆ, ಸಾವಿನ ಸಂಖ್ಯೆಯನ್ನು ನೀಡಲಾಗಿತ್ತು. ಆ ಕಾಲದಲ್ಲಿ ಸಾಮಾ ಜಿಕ ಮಾಧ್ಯಮ ಇರಲಿಲ್ಲ. ಈಗಂತೂ ಅತ್ಯಾಧುನಿಕ ತಂತ್ರಜ್ಞಾನವಿದೆ, ಜಾಲ ತಾಣ ಮಾಧ್ಯಮಗಳಿವೆ... ಕಾಲ್ತುಳಿತದಲ್ಲಿ ಕನಿಷ್ಠ ಎಂದರೂ ಸುಮಾರು 300-600 ಜನ ಮೃತಪಟ್ಟಿದ್ದಾರೆ ಎಂದು ಜನರೇ ಹೇಳುತ್ತಿದ್ದಾರೆ. ಈ ಮೃತದೇಹಗಳಿಗೆ ಹಿಂದೂ ಸಂಪ್ರದಾಯದಂತೆ ಅಂತ್ಯ
ಸಂಸ್ಕಾರವನ್ನೂ ಮಾಡಲಾಗಿಲ್ಲ.
- ಪಪ್ಪು ಯಾದವ್, ಸಂಸದ