ಬೀಜಿಂಗ್: ಚೀನಾದ ಆಮದುಗಳ ಮೇಲೆ ಹೆಚ್ಚುವರಿ 10% ಸುಂಕ ವಿಧಿಸುವ ಅಮೆರಿಕದ ಅಧ್ಯಕ್ಷ ಟ್ರಂಪ್ ಆದೇಶವನ್ನು ಖಂಡಿಸಿರುವ ಚೀನಾ `ಇದು ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಒ) ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ' ಎಂದಿದೆ.
ವ್ಯಾಪಾರ ಯುದ್ಧದಲ್ಲಿ ಅಥವಾ ತೆರಿಗೆ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ ಎಂದು ಚೀನಾದ ವಾಣಿಜ್ಯ ಇಲಾಖೆ ಪ್ರತಿಕ್ರಿಯಿಸಿದ್ದು ಅಮೆರಿಕದ ಈ ಕ್ರಮವನ್ನು ಡಬ್ಲ್ಯೂಟಿಒ ನಿಯಮದಡಿ ಪ್ರಶ್ನಿಸಲಾಗುವುದು ಎಂದಿದೆ.
ಹೆಚ್ಚುವರಿ ಸುಂಕವು ಮಾದಕ ವಸ್ತು ನಿಯಂತ್ರಣಕ್ಕೆ ಸಂಬಂಧಿಸಿದ ಭವಿಷ್ಯದ ದ್ವಿಪಕ್ಷೀಯ ಸಂಬಂಧದ ಮೇಲೆ ಅನಿವಾರ್ಯವಾಗಿ ಪರಿಣಾಮ ಬೀರಲಿದೆ ಮತ್ತು ಹಾನಿಯುಂಟು ಮಾಡಲಿದೆ ಎಂದು ಇಲಾಖೆ ಹೇಳಿದೆ.
ಟ್ರಂಪ್ ಅವರ ಕ್ರಮವನ್ನು ಬಲವಾಗಿ ವಿರೋಧಿಸುವುದಾಗಿ ಹೇಳಿರುವ ಚೀನಾ ಇದಕ್ಕೆ ಸೂಕ್ತವಾದ ಪ್ರತಿಕ್ರಮವನ್ನು ಆರಂಭಿಸುವುದಾಗಿ ಘೋಷಿಸಿದೆ. ಅನಗತ್ಯದ ವ್ಯಾಪಾರ ಯುದ್ಧದ ಬದಲು ಸಹಕಾರ ಬಲವರ್ಧನೆಯ ನಿಟ್ಟಿನಲ್ಲಿ ಮುಕ್ತ ಸಂವಾದದಲ್ಲಿ ತೊಡಗಿಕೊಳ್ಳುವಂತೆ ಟ್ರಂಪ್ ಸರಕಾರವನ್ನು ಚೀನಾ ಆಗ್ರಹಿಸಿದೆ.
ವ್ಯಾಪಾರ ಸಂಘರ್ಷ ಅಥವಾ ತೆರಿಗೆ ಸಂಘರ್ಷದಲ್ಲಿ ಯಾರೂ ಗೆಲ್ಲುವುದಿಲ್ಲ ಎಂಬುದು ನಮ್ಮ ನಂಬಿಕೆಯಾಗಿದೆ. ಜತೆಗೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಸಂರಕ್ಷಿಸಲು ನಾವು ಕಟಿಬದ್ಧವಾಗಿದ್ದೇವೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ.