ವಾಷಿಂಗ್ಟನ್: ಗುತ್ತಿಗೆದಾರರು ಮತ್ತು ಅನುದಾನ ಪಡೆಯುವವರಿಗೆ ಅವರು ಹಿಂದೆ ಮಾಡಿರುವ ಕೆಲಸಗಳಿಗೆ ವಿದೇಶಿ ನೆರವು ನಿಧಿಯನ್ನು ಪಾವತಿಸಬೇಕು ಎಂದು ಅಧೀನ ನ್ಯಾಯಾಲಯವು ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತಕ್ಕೆ ನೀಡಿದ್ದ ಸೂಚನೆಗೆ ಅಮೆರಿಕದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಬುಧವಾರ ತಡೆ ನೀಡಿದ್ದಾರೆ.
ವಾಷಿಂಗ್ಟನ್‌ನಲ್ಲಿ ಇರುವ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅಮೀರ್ ಅಲಿ ಅವರು ಈ ಪಾವತಿಗಳನ್ನು ಬುಧವಾರ ಮಧ್ಯರಾತ್ರಿ 11.59ಕ್ಕೆ ಮೊದಲು ಮಾಡಬೇಕು ಎಂದು ಗಡುವು ನೀಡಿದ್ದರು. ಅಲಿ ಅವರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಲಾಭದ ಉದ್ದೇಶವಿಲ್ಲದ ಕೆಲವು ಗುಂಪುಗಳು ಹಾಗೂ ಕೆಲವು ಉದ್ದಿಮೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಲಿ ಅವರು ಈ ಸೂಚನೆ ನೀಡಿದ್ದರು. ಈ ಆದೇಶದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಅಮೆರಿಕದ ಆಡಳಿತ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಲು ಮೇಲ್ಮನವಿ ಸಮಿತಿಯು ಒಪ್ಪಿರಲಿಲ್ಲ.
ಅಮೆರಿಕದ ಅಂತರರಾಷ್ಟ್ರೀಯ ನೆರವು ಏಜೆನ್ಸಿಯ (ಯುಎಸ್‌ಎಐಡಿ) ಶೇಕಡ 90ರಷ್ಟು ವಿದೇಶಿ ನೆರವು ಗುತ್ತಿಗೆಗಳನ್ನು, ವಿಶ್ವದಾದ್ಯಂತ ಅಮೆರಿಕ ನೀಡುತ್ತಿರುವ ನೆರವಿನಲ್ಲಿ 60 ಬಿಲಿಯನ್ ಡಾಲರ್ (ಅಂದಾಜು ₹ 5.23 ಲಕ್ಷ ಕೋಟಿ) ಮೊತ್ತವನ್ನು ನಿಲ್ಲಿಸಲಾಗುತ್ತಿದೆ ಎಂದು ಟ್ರಂಪ್ ನೇತೃತ್ವದ ಆಡಳಿತ ಹೇಳಿದೆ.
ಟ್ರಂಪ್ ನೇತೃತ್ವದ ಆಡಳಿತವು ಸಿದ್ಧಪಡಿಸಿರುವ ಆಂತರಿಕ ಜ್ಞಾಪನಾಪತ್ರದಲ್ಲಿ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿವರಗಳಲ್ಲಿ ಈ ಮಾಹಿತಿ ಇದೆ.
'ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸಲು, ತೆರಿಗೆದಾರರ ಹಣವನ್ನು ಹೆಚ್ಚು ವಿವೇಕಯುತವಾಗಿ ಬಳಸಲು' ವಿದೇಶಗಳಿಗೆ ನೀಡುವ ನೆರವಿನ ಮೊತ್ತವನ್ನು ಹೇಗೆ ಬಳಸಬೇಕು ಎಂಬ ವಿಚಾರದಲ್ಲಿ ಇನ್ನಷ್ಟು ಬದಲಾವಣೆಗಳ ಆಲೋಚನೆ ಇದೆ ಎಂದು ಜ್ಞಾಪನಾಪತ್ರದಲ್ಲಿ ಹೇಳಲಾಗಿದೆ.
'ಭಾರತದ ಪದವೀಧರರಿಗೆ ಗೋಲ್ಡ್ ಕಾರ್ಡ್‌ನಿಂದ ಅನುಕೂಲ'
ವಾಷಿಂಗ್ಟನ್ : 'ಪ್ರಸ್ತಾವಿತ ಗೋಲ್ಡ್ ಕಾರ್ಡ್ ವೀಸಾ ವ್ಯವಸ್ಥೆಯಿಂದ ಅಮೆರಿಕದ ಕಂಪನಿಗಳು ಹಾರ್ವರ್ಡ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿಯುವ ಭಾರತದ ಪದವೀಧರರನ್ನು ನೇಮಕ ಮಾಡಿಕೊಳ್ಳಬಹುದು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಐವತ್ತು ಲಕ್ಷ ಡಾಲರ್ (ಅಂದಾಜು ₹43.45 ಕೋಟಿ) ನೀಡಿ 'ಗೋಲ್ಡ್ ಕಾರ್ಡ್' ವೀಸಾ ಪಡೆಯಬಹುದಾದ ವ್ಯವಸ್ಥೆ ಆರಂಭಿಸುವುದಾಗಿ ಟ್ರಂಪ್ ಬುಧವಾರ ಘೋಷಿಸಿದ್ದರು. ಈ ವೀಸಾ ಪಡೆಯುವವರಿಗೆ ಅಮೆರಿಕದ ಪೌರತ್ವವೂ ಸಿಗಲಿದೆ. 'ಈಗಿರುವ ವಲಸೆ ನಿಯಮವು ಅಂತರರಾಷ್ಟ್ರೀಯ ಪ್ರತಿಭೆಗಳನ್ನು ಅಮೆರಿಕದಲ್ಲಿ ಉಳಿಸಿಕೊಳ್ಳಲು ಅಡ್ಡಿಯಾಗುತ್ತಿದೆ. ಅದರಲ್ಲೂ ಭಾರತೀಯರು ಅಮೆರಿಕದಿಂದ ದೂರ ಉಳಿಯುವಂತಾಗಿದೆ
ಕೆಲಸ ಸಿಕ್ಕರೂ ಇಲ್ಲಿ ನೆಲಸುವ ಅವಕಾಶ ಸಿಗದ ಕಾರಣ ತಮ್ಮ ದೇಶಕ್ಕೆ ಹಿಂತಿರುಗುತ್ತಾರೆ. ಅಲ್ಲಿ ಉದ್ಯಮಗಳನ್ನು ಆರಂಭಿಸಿ ಶತಕೋಟ್ಯಧಿಪತಿಗಳಾಗಿ ನೂರಾರು ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ' ಎಂದು ಅವರು ತಿಳಿಸಿದರು.