ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಹೇಳಿದ್ದಾರೆ ಎನ್ನಲಾದ 'ಪಾಪದ ಮಹಿಳೆ' ಹಾಗೂ 'ಪಾಪ' ಎಂಬ ಹೇಳಿಕೆಗಳು ಶುಕ್ರವಾರ ವಿವಾದದ ಕಿಡಿ ಹೊತ್ತಿಸಿವೆ. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿ ನಡೆದಿದೆ.
ಇನ್ನೊಂದೆಡೆ, 'ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ಕುರಿತಾಗಿ ಆಡಿರುವ ಮಾತುಗಳು ಅವರ ಉನ್ನತ ಸ್ಥಾನದ ಘನತೆಗೆ ಧಕ್ಕೆ ತರುವಂಥವು. ಈ ಹೇಳಿಕೆಗಳನ್ನು ಒಪ್ಪಲಾಗದು' ಎಂದು ರಾಷ್ಟ್ರಪತಿ ಭವನ ಪ್ರತಿಕ್ರಿಯಿಸಿದೆ.
ಬಜೆಟ್ ಅಧಿವೇಶನ ಅಂಗವಾಗಿ, ರಾಷ್ಟ್ರಪತಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಬಳಿಕ, ಸೋನಿಯಾ ಗಾಂಧಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸತ್ ಭವನ ಸಂಕೀರ್ಣದಲ್ಲಿ ರಾಷ್ಟ್ರಪತಿಗಳ ಭಾಷಣ ಕುರಿತು ಚರ್ಚೆ ಮಾಡುತ್ತಿದ್ದರು.
'ರಾಷ್ಟ್ರಪತಿಗಳ ಭಾಷಣ ನೀರಸವಾಗಿತ್ತೇ' ಎಂದು ರಾಹುಲ್ ಅವರು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಆಗ, 'ಪಾಪ ರಾಷ್ಟ್ರಪತಿ ಅವರು ಸುದೀರ್ಘ ಭಾಷಣ ಮುಗಿಸಿದಾಗ ಬಹಳ ದಣಿದಂತೆ ಕಂಡರು.. ಅವರಿಗೆ ಮಾತನಾಡಲೂ ಕಷ್ಟವಾಗುತ್ತಿತ್ತು, ಪಾಪ' ಎಂದು ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಪ್ರಧಾನಿ ವಾಗ್ದಾಳಿ: ದೆಹಲಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ರಾಜ ಮನೆತನ'ದ ಅಹಂಕಾರ ನೋಡಿ. ಬುಡಕಟ್ಟು ಹಿನ್ನೆಲೆಯ ರಾಷ್ಟ್ರಪತಿಗೆ ಅವಮಾನಿಸಿದೆ. ಬಡವರು, ದಲಿತರು, ಬುಡಕಟ್ಟು ಜನರು ಹಾಗೂ ಒಬಿಸಿಗಳ ಪೈಕಿ ಪ್ರಗತಿ ಸಾಧಿಸಿದವರನ್ನೆಲ್ಲಾ ಕಾಂಗ್ರೆಸ್ ಅವಮಾನಿಸುತ್ತದೆ' ಎಂದು ಟೀಕಿಸಿದ್ದಾರೆ.
'ರಾಷ್ಟ್ರಪತಿಯವರು, ದೇಶದ ಆರ್ಥಿಕ ಪ್ರಗತಿ, ರೈತರ ಕಲ್ಯಾಣ, ಮೆಟ್ರೊ ಯೋಜನೆಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಕುರಿತು ತಮ್ಮ ಭಾಷಣದಲ್ಲಿ ಹೊಗಳಿದ್ದಾರೆ. ಆದರೆ, ಕಾಂಗ್ರೆಸ್ ಈ ಭಾಷಣ ತಿರಸ್ಕರಿಸಿದೆ. ಕೂಡ ಕಾಂಗ್ರೆಸ್ ನೀರಸ ಎನ್ನುತ್ತದೆ' ಎಂದು ಮೋದಿ ಟೀಕಿಸಿದ್ದಾರೆ.
ಖರ್ಗೆ ತಿರುಗೇಟು: ಪ್ರಧಾನಿ ಮೋದಿ ಹೇಳಿಕೆಗೆ 'ಎಕ್ಸ್'ನಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,'ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವ ಮೂಲಕ ಮೋದಿ ಸರ್ಕಾರವೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದೆ' ಎಂದಿದ್ದಾರೆ.
'ಕಾಂಗ್ರೆಸ್ ಹಾಗೂ ಪಕ್ಷದ ನಾಯಕರು ರಾಷ್ಟ್ರಪತಿ ಅವರನ್ನಾಗಲಿ ಅಥವಾ ಯಾವುದೇ ಪ್ರಜೆಯನ್ನಾಗಲಿ ಎಂದಿಗೂ ಅವಮಾನಿಸುವುದಿಲ್ಲ. ಇದು ನಮ್ಮ ಸಂಸ್ಕೃತಿಯೂ ಅಲ್ಲ' ಎಂದಿದ್ದಾರೆ.
'ಮೋದಿ ಸರ್ಕಾರಕ್ಕೆ ಇಂದು ಆರ್ಥಿಕ ಸಮೀಕ್ಷೆ ಕನ್ನಡಿ ಹಿಡಿದಿದೆ. ದೇಶದ ಆರ್ಥಿಕ ದುಸ್ಥಿತಿ ಮರೆಮಾಚುವುದಕ್ಕಾಗಿ ಬಿಜೆಪಿ ಹಾಗೂ ಕೆಲ ಮಾಧ್ಯಮಗಳು ಸೋನಿಯಾ ಗಾಂಧಿ ಬಳಸಿದ ಕೆಲ ನುಡಿಗಟ್ಟುಗಳನ್ನು ತಿರುಚಿವೆ' ಎಂದೂ ಅವರು ಹೇಳಿದ್ಧಾರೆ.
ಬೇಷರತ್ ಕ್ಷಮೆಗೆ ನಡ್ಡಾ ಆಗ್ರಹ
ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸಾಂವಿಧಾನಿಕ ಹುದ್ದೆಗಳನ್ನು ಅವಮಾನಿಸುವುದು ಕಾಂಗ್ರೆಸ್‌ಗೆ ಹಳೆಯ ಚಾಳಿ. ಕೂಡಲೇ ಅವರು ರಾಷ್ಟ್ರಪತಿ ಹಾಗೂ ದೇಶದ ಬುಡಕಟ್ಟು ಸಮುದಾಯಗಳ ಜನರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗ್ರಹಿಸಿದ್ದಾರೆ.
ದೇಶದ ಮಧ್ಯಮ ವರ್ಗದವರ ಸೂರಿನ ಕನಸು ಈಡೇರಿಸಲು ಸರ್ಕಾರ ಬದ್ಧ: ರಾಷ್ಟ್ರಪತಿ ಮುರ್ಮು
'ಅತ್ಯುನ್ನತ ಸ್ಥಾನಕ್ಕೆ ಅಗೌರವ'
'ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಸಂಸತ್‌ನಲ್ಲಿ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗಳು ಮುರ್ಮು ಅವರು ಅಲಂಕರಿಸಿರುವ ಅತ್ಯುನ್ನತ ಸ್ಥಾನಕ್ಕೆ ಅಗೌರವ ತೋರುವಂತಿವೆ. ಇಂತಹ ಮಾತುಗಳನ್ನು ಒಪ್ಪಲಾಗದು' ಎಂದು ರಾಷ್ಟ್ರಪತಿ ಭವನ ಶುಕ್ರವಾರ ಹೇಳಿದೆ. 'ಈ ನಾಯಕರಿಗೆ ಹಿಂದಿ ಸೇರಿದಂತೆ ಭಾರತೀಯ ಭಾಷೆಗಳ ಬಳಕೆ ಹಾಗೂ ಈ ಭಾಷೆಗಳಲ್ಲಿ ಬಳಸುವ ನುಡಿಗಟ್ಟುಗಳ ಕುರಿತು ಮಾಹಿತಿ ಇದ್ದಂತಿಲ್ಲ. ಹೀಗಾಗಿ ತಪ್ಪು ಅರ್ಥ ಬರುವಂತೆ ಮಾತನಾಡಿದ್ದಾರೆ ಎಂಬುದು ನಮ್ಮ ನಂಬಿಕೆ' ಎಂದು ರಾಷ್ಟ್ರಪತಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
'ಏನೇ ಇರಲಿ ಇಂತಹ ಹೇಳಿಕೆಗಳು ಕೀಳು ಅಭಿರುಚಿಯಿಂದ ಕೂಡಿವೆ. ಈ ರೀತಿ ಹೇಳಿದ್ದು ದುರದೃಷ್ಟಕರ. ಇಂತಹ ಹೇಳಿಕೆಗಳನ್ನು ತಪ್ಪಿಸಬಹುದಾಗಿತ್ತು' ಎಂದೂ ಹೇಳಿದೆ. 'ಉಭಯ ಸದನ ಉದ್ದೇಶಿಸಿ ಭಾಷಣ ಮಾಡುವ ವೇಳೆ ರಾಷ್ಟ್ರಪತಿ ದಣಿದಿದ್ದರು ಎಂಬ ಮಾತಿನಲ್ಲಿ ಸತ್ಯವಿಲ್ಲ. ಅವರು ಯಾವ ಹಂತದಲ್ಲಿಯೂ ಆಯಾಸಗೊಂಡಿರಲಿಲ್ಲ. ನಿರ್ಲಕ್ಷಿತ ಸಮುದಾಯಗಳು ಮಹಿಳೆಯರು ಹಾಗೂ ರೈತರ ಪರವಾಗಿ ಮಾತನಾಡುವಾಗ ದಣಿಯು ತನ್ನ ಹತ್ತಿರ ಸುಳಿಯದು ಎಂಬ ನಂಬಿಕೆಯನ್ನು ರಾಷ್ಟ್ರಪತಿ ಮುರ್ಮು ಹೊಂದಿದ್ದರು ಎಂದು ಸ್ಪಷ್ಟಪಡಿಸುತ್ತೇವೆ' ಎಂದೂ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಮಾಧ್ಯಮಗಳು ಹೇಳಿಕೆ ತಿರುಚಿವೆ: ಪ್ರಿಯಾಂಕಾ
'ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅತ್ಯಂತ ಗೌರವದಿಂದ ಕಾಣುತ್ತಾರೆ. ಅವರ ಹೇಳಿಕೆಗಳನ್ನು ಮಾಧ್ಯಮಗಳು ತಿರುಚಿದ್ದು ದುರದೃಷ್ಟಕರ' ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಹೇಳಿದ್ದಾರೆ. 'ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕು' ಎಂದು ಆಗ್ರಹಿಸಿರುವ ಬಿಜೆಪಿ ವಿರುದ್ಧವೂ ಟೀಕೆ ಮಾಡಿರುವ ಅವರು 'ದೇಶವನ್ನು ಹಾಳು ಮಾಡಿರುವುದಕ್ಕಾಗಿ ಮೊದಲು ಬಿಜೆಪಿ ಕ್ಷಮೆ ಕೇಳಬೇಕು' ಎಂದಿದ್ದಾರೆ. 'ನನ್ನ ತಾಯಿಗೆ 78 ವರ್ಷ. ಅವರು ರಾಷ್ಟ್ರಪತಿಗಳನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣ ದೀರ್ಘವಾಗಿದ್ದ ಕಾರಣ ಪಾಪ ರಾಷ್ಟ್ರಪತಿ ದಣಿದಿರಬಹುದು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಅವರ ಈ ಮಾತುಗಳನ್ನು ಮಾಧ್ಯಮಗಳು ತಿರುಚಿದ್ದು ದುರದೃಷ್ಟಕರ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜೆ.ಪಿ.ನಡ್ಡಾ ಬಿಜೆಪಿ ಅಧ್ಯಕ್ಷಉದ್ದೇಶಪೂರ್ವಕವಾಗಿ ಇಂತಹ ಪದಗಳನ್ನು ಬಳಸಿರುವುದು ಕಾಂಗ್ರೆಸ್ ಪಕ್ಷದ ಬಡವರ ಬುಡಕಟ್ಟ ಜನರ ವಿರೋಧಿ ಹಾಗೂ ಶ್ರೀಮಂತರ ಪರ ನಿಲುವನ್ನು ತೋರಿಸುತ್ತದೆ. ರಾಷ್ಟ್ರಪತಿ ಹಾಗೂ ದೇಶದ ಬುಡಕಟ್ಟು ಸಮುದಾಯಗಳ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸುತ್ತೇನೆ - - ಅಮಿತ್ ಮಾಳವೀಯ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥಈ ಹೇಳಿಕೆಗಳು ಸೋನಿಯಾ ಗಾಂಧಿ ಅವರ ಊಳಿಗಮಾನ್ಯ ಮನಸ್ಥಿತಿಯನ್ನು ತೋರಿಸುತ್ತದೆ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೇರಿರುವ ಬುಡಕಟ್ಟು ಮಹಿಳೆ ಕುರಿತು ಕಾಂಗ್ರೆಸ್ ಪಕ್ಷ ಅಪಹಾಸ್ಯ ಮಾಡುತ್ತಿರುವುದು ಇದೇ ಮೊದಲಲ್ಲ. ರಾಹುಲ್ ಗಾಂಧಿ ಪದೇಪದೇ ಸಂವಿಧಾನದ ಪ್ರತಿಯೊಂದನ್ನು ಪ್ರದರ್ಶಿಸುತ್ತಾರೆ. ಆದರೆ ರಾಷ್ಟ್ರಪತಿ ಅವರನ್ನು ಭೇಟಿಯಾಗುವ ಸೌಜನ್ಯವನ್ನೂ ಅವರು ಪ್ರದರ್ಶಿಸಿಲ್ಲ- ಗೌರವ ಗೊಗೋಯಿಸೋನಿಯಾ ಗಾಂಧಿ ಅವರು ರಾಷ್ಟ್ರಪತಿಗಳ ಆರೋಗ್ಯದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದನ್ನು ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಪತಿಯವರ ಕುರಿತು ಗೌರವ ಹಾಗೂ ಸಹಾನುಭೂತಿ ಹೊಂದಿದ್ದಾರೆ -ಸುಪ್ರಿಯಾ ಶ್ರೀನೇತ್ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳ ಮುಖ್ಯಸ್ಥೆಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕ 59 ನಿಮಿಷ ಭಾಷಣ ಮಾಡಿ ದಣಿದಿದ್ದ ರಾಷ್ಟ್ರಪತಿಗಳ ಬಗ್ಗೆ ಸೋನಿಯಾ ಗಾಂಧಿ ಅವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ನೀವು (ಬಿಜೆಪಿ ಹಾಗೂ ಮಾಧ್ಯಮದವರು) ಶಾಲೆ ಅಥವಾ ಕಾಲೇಜು ಮೆಟ್ಟಿಲು ಹತ್ತಿದ್ದರೆ ಅಲಂಕಾರಗಳ ಬಗ್ಗೆ ಹಾಗೂ ಸಹಾನುಭೂತಿ ವ್ಯಕ್ತಪಡಿಸಲು 'ಪಾಪ' ಎಂಬ ಪ್ರಯೋಗ ಮಾಡುವ ಬಗ್ಗೆ ಗೊತ್ತಿರುತ್ತಿತ್ತು.