ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡಿದ್ದಾರೆ ಎಂದು ಮಹಿಳೆಯರ ಗುಂಪು ಹೇಳಿದ್ದನ್ನು ಕೇಳಿ ಬಿಹಾರದ ರೈಲ್ವೆ ಅಧಿಕಾರಿಯೊಬ್ಬರು ದಿಗ್ಭ್ರಮೆಗೆ ಒಳಗಾಗಿದ್ದಾರೆ.
ಉತ್ತರ ಪ್ರದೇಶದ ಗಡಿಯಲ್ಲಿರುವ ಬಕ್ಸರ್ ರೈಲು ನಿಲ್ದಾಣದಲ್ಲಿ ದಾನಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಜಯಂತ್ ಕುಮಾರ್ ಮತ್ತು ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ತೆರಳುವ ಯಾತ್ರಾರ್ಥಿಗಳ ನಡುವಿನ ಸಂಭಾಷಣೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಜಯಂತ್ ಕುಮಾರ್ ಅವರು ಇಂದು ಬೆಳಿಗ್ಗೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟನೆ ಮತ್ತು ರೈಲುಗಳ ಸಂಚಾರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದ ವೇಳೆ ವಿವಿಧ ವಯೋಮಾನದ ಮಹಿಳೆಯರ ಗುಂಪೊಂದು ರೈಲ್ವೆ ಹಳಿಗಳ ಬಳಿ ನಿಂತಿರುವುದನ್ನು ಗಮನಿಸಿದ್ದರು. ಬಳಿಕ ಅವರ ಬಳಿ ತೆರಳಿ ಇಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಆಗ ನಾವೆಲ್ಲರೂ ಪ್ರಯಾಗ್‌ರಾಜ್‌ಗೆ ತೆರಳುವ ರೈಲಿಗೆ ಕಾಯುತ್ತಿದ್ದೇವೆ ಎಂದು ಮಹಿಳೆಯರು ಹೇಳಿದ್ದರು.
'ನಿಮ್ಮ ಬಳಿ ಟಿಕೆಟ್ ಇದೆಯೇ?, ನೀವು ಟಿಕೆಟ್ ಇಲ್ಲದೆ ಪ್ರಯಾಣಿಸಬಹುದು ಎಂದು ನಿಮಗೆ ಹೇಳಿದ್ದು ಯಾರು? ಎಂದು ಡಿಆರ್‌ಎಂ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಮಹಿಳೆಯರು, 'ಪ್ರಧಾನಿ ಮೋದಿ ಜೀ ಅವರು ಪ್ರಯಾಗರಾಜ್‌ನ ಕುಂಭಮೇಳಕ್ಕೆ ತೆರಳುವ ಭಕ್ತರಿಗೆ ಉಚಿತ ಟಿಕೆಟ್ ಪಡೆದು ಪ್ರಯಾಣಿಸಲು ಅನುಮತಿ ನೀಡಿದ್ದಾರೆ' ಎಂದು ಹೇಳಿದ್ದಾರೆ.
ತಕ್ಷಣ ಟಿಕೆಟ್ ರಹಿತ ಪ್ರಯಾಣದ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಿಕೊಟ್ಟ ಡಿಆರ್‌ಎಂ, 'ನೀವು ತಪ್ಪಾಗಿ ಭಾವಿಸಿದ್ದೀರಿ... ಪ್ರಧಾನಿಯಾಗಲಿ ಅಥವಾ ಇತರ ಯಾವುದೇ ಅಧಿಕಾರಿಯಾಗಲಿ ಟಿಕೆಟ್ ರಹಿತ ಪ್ರಯಾಣಕ್ಕೆ ಅವಕಾಶ ನೀಡಿಲ್ಲ. ಒಂದು ವೇಳೆ ಪ್ರಯಾಗರಾಜ್‌ಗೆ ಪ್ರಯಾಣಿಸಲು ಬಯಸಿದರೆ, ನೀವು ಟಿಕೆಟ್ ಖರೀದಿಸಿ ಪ್ರಯಾಣಿಸಬೇಕು. ಇಲ್ಲವಾದಲ್ಲಿ ನಿಮ್ಮ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.
ನವದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದ ವೇಳೆ 18 ಜನ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗರಾಜ್‌ಗೆ ತೆರಳುತ್ತಿದ್ದ ಜನರು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಾರಣ, ರೈಲು ನಿಲ್ದಾಣದಲ್ಲಿ ದಟ್ಟಣೆ ಇತ್ತು. ಆದರೆ, ಪ್ರಯಾಗರಾಜ್‌ಗೆ ಸಂಚರಿಸುವ ರೈಲುಗಳ ಹೆಸರು ಕುರಿತು ಪ್ರಯಾಣಿಕರಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದಾಗಿ ದೆಹಲಿ ಪೊಲೀಸರು ಹೇಳಿದ್ದರು.