HEALTH TIPS

ಪಾಕ್‌ ಗಡಿಯಲ್ಲಿ ಅದಾನಿ ಇಂಧನ ಪಾರ್ಕ್‌ಗೆ ಅನುವು: ಕಾಂಗ್ರೆಸ್‌ ಕಿಡಿ

 ನವದೆಹಲಿ: ಪಾಕಿಸ್ತಾನದ ಗಡಿಗೆ ಸಮೀಪದಲ್ಲಿರುವ ಗುಜರಾತ್‌ನ ಖಾವ್ಡಾದಲ್ಲಿ ನವೀಕರಿಸಬಹುದಾದ ಇಂಧನ ಪಾರ್ಕ್‌ ನಿರ್ಮಿಸಲು ಅದಾನಿ ಗ್ರೂಪ್‌ಗೆ ಅನುವು ಮಾಡಿಕೊಡಲು ಗಡಿ ಭದ್ರತಾ ನಿಯಮಗಳನ್ನು ಬದಲಿಸಿರುವುದು ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಭದ್ರತೆಗಿಂತ ಅವರ 'ಆಪ್ತ ಸ್ನೇಹಿತರ' ಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬುಧವಾರ ಟೀಕಾಪ್ರಹಾರ ಮಾಡಿದೆ.

'ಬಿಜೆಪಿಯ ನಕಲಿ ರಾಷ್ಟ್ರೀಯವಾದದ ಮುಖ ಈಗ ಮತ್ತೊಮ್ಮೆ ಅನಾವರಣಗೊಂಡಿದೆ' ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.


'ಮೋದಿ ಅವರೇ ನಿಮ್ಮ ಆತ್ಮೀಯ ಗೆಳೆಯನಿಗೆ ಅಮೂಲ್ಯವಾದ ಆಯಕಟ್ಟಿನ ಭೂಮಿಯನ್ನು ಕೊಡುಗೆಯಾಗಿ ನೀಡಿರುವುದು ನಿಜವೇ. ಭಾರತ- ಪಾಕ್‌ ಗಡಿಯಲ್ಲಿ ತುಂಬಾ ಸುಲಭವಾಗಿ ದಾಳಿ ನಡೆಸಬಹುದಾದ ಸ್ಥಳದಲ್ಲಿ ಖಾಸಗಿ ಯೋಜನೆಗೆ ಸರ್ಕಾರ ಅನುವು ಮಾಡಿಕೊಟ್ಟಿರುವುದು ಏಕೆ, ಇದು ಸೇನೆಯ ರಕ್ಷಣಾ ಜವಾಬ್ದಾರಿಗಳನ್ನು ಹೆಚ್ಚಿಸುವುದಿಲ್ಲವೇ ಮತ್ತು ರಕ್ಷಣಾ ಕಾರ್ಯತಂತ್ರದ ಅನುಕೂಲವನ್ನು ತಗ್ಗಿಸುವುದಿಲ್ಲವೇ' ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಭಾರತ-ಪಾಕ್ ಗಡಿಯಲ್ಲಿನ ಸೂಕ್ಷ್ಮ ಪ್ರದೇಶವನ್ನು ವಾಣಿಜ್ಯ ಉದ್ದೇಶದಿಂದ ಲಾಭದಾಯಕವಾಗಿಸಲು ರಕ್ಷಣಾ ಸಚಿವಾಲಯವು ಭದ್ರತಾ ನಿಯಮಗಳಿಗೆ ತಿದ್ದುಪಡಿ ಮಾಡಿದೆ ಎಂಬ ಖಾಸಗಿ ಸಂವಹನ ಮತ್ತು ಗೋಪ್ಯ ದಾಖಲೆಗಳನ್ನು ಉಲ್ಲೇಖಿಸಿ 'ದಿ ಗಾರ್ಡಿಯನ್' ವರದಿ ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್‌ ಟೀಕಾಪ್ರಹಾರ ನಡೆಸಿದೆ.

ಈ ಹಿಂದೆ, ಗಡಿಯಿಂದ 10 ಕಿ.ಮೀವರೆಗಿನ ಅಸ್ತಿತ್ವದಲ್ಲಿರುವ ಗ್ರಾಮಗಳು ಮತ್ತು ರಸ್ತೆಗಳನ್ನು ಮೀರಿ ಯಾವುದೇ ಪ್ರಮುಖ ನಿರ್ಮಾಣಕ್ಕೆ ಅವಕಾಶವಿರಲಿಲ್ಲ.

'ಕೋಟ್ಯಧಿಪತಿಗಳ ಲಾಭಕ್ಕಾಗಿ ಬಿಜೆಪಿ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡಿದೆ. ಈ ಸಡಿಲಿಕೆ ಭಾರತ-ಪಾಕ್ ಗಡಿಗೆ ಮಾತ್ರವಲ್ಲ, ಬಾಂಗ್ಲಾದೇಶ, ಚೀನಾ, ಮ್ಯಾನ್ಮಾರ್ ಮತ್ತು ನೇಪಾಳದ ಗಡಿಯಲ್ಲಿಯೂ ಆಗಿದೆ' ಎಂದು ಖರ್ಗೆ ಆರೋಪಿಸಿದ್ದಾರೆ.

'ದೇಶದ ಎಲ್ಲ ಸಂಪನ್ಮೂಲಗಳನ್ನು ಪ್ರಧಾನಿಯ 'ಸ್ನೇಹಿತ'ನಿಗೆ ಹಸ್ತಾಂತರಿಸುವ ಪ್ರಕ್ರಿಯೆಯು ಗಡಿ ಭದ್ರತಾ ನಿಯಮಗಳನ್ನು ಸಹ ಬದಲಾಯಿಸುವ ಹಂತವನ್ನು ತಲುಪಿದೆಯೇ' ಎಂದು ಪ್ರಶ್ನಿಸಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾಧ್ಯಮ ವರದಿ ಉಲ್ಲೇಖಿಸಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries