ಕಯ್ಯಾರರ ಕವನ ವಾಚಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಮಂಜೇಶ್ವರ ಶಾಸಕರು ಗಮನಸೆಳೆದರು. ಬಹು ನಿರೀಕ್ಷಿಯಿಂದ ಕಂಡ ಕೇರಳ ರಾಜ್ಯ ಬಜೆಟಿನಲ್ಲಿ ಕಾಸರಗೋಡು ಜಿಲ್ಲೆ ಹಾಗೂ ಮಂಜೇಶ್ವರ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಅವಗಣಿಸಿರುವುದನ್ನು ಶಾಸಕರು ತೀವ್ರವಾಗಿ ಖಂಡಿಸಿದರು. ಗಡಿನಾಡಿನ ಜನರು ಕೇಂದ್ರ ಕೇರಳ ಹಾಗೂ ಹತ್ತಿರದ ಕರ್ನಾಟಕ ರಾಜ್ಯದ ಬಜೆಟ್ ಗಳನ್ನು ಗಮನಿಸುವವರು. ಗ್ಯಾರಂಟಿಗಳ ಮೂಲಕ ಜನರ ದೈನಂದಿನ ಬದುಕಿನಲ್ಲಿ ಭರವಸೆಯನ್ನು ತುಂಬಿದ ಕರನಾಟಕದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಗಳ ಜನಕಲ್ಯಾಣ ಯೋಜನೆಗಳನ್ನು ಬಗ್ಗೆ ಶಾಸಕರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ನಿರಂತರವಾಗಿ ಗಡಿನಾಡು ಮಂಜೇಶ್ವರ ಹಾಗೂ ಕಾಸರಗೋಡು ಜಿಲ್ಲೆಯನ್ನು ಸರ್ಕಾರವು ಅವಗಣಿಸುವುದು ಸರಿಯಲ್ಲ. ಇದು ಒಂದು ಪ್ರದೇಶದ, ಜನರ ಬಗ್ಗೆ ಸರ್ಕಾರ ತೋರುವ ಅನ್ಯಾಯವೆಂದು ಶಾಸಕರು ಕಿಡಿ ಕಾರಿದ್ದಾರೆ.
ಈ ವೇಳೆ ದಶಕಗಳ ಹಿಂದೆಯೇ ಕಾಸರಗೋಡು ಕೇರಳಕ್ಕೆ ಸೇರ್ಪಡೆಯಾದಾಗ ಮುಂದೆ ಬರುವ ಸಮಸ್ಯೆ-ಸವಾಲುಗಳನ್ನು ಗ್ರಹಿಸಿ ಕವಿ, ನಾಡೋಜ ಕೈಯಾರರ " ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ" ಎಂಬ ಕ್ರಾಂತಿಯ ಕಿಡಿ ಹಬ್ಬಿಸಿದ ಕವಿತೆ ಹಾಡುವುದರ ಮೂಲಕ ವಿಧಾನಸಭೆಯ ಪೂರ್ಣ ಗಮನವನ್ನು ಸೆಳೆದರು.