ಕಫ್ರ್ ಕಿಲಾ: ದಕ್ಷಿಣ ಲೆಬನಾನ್‌ನಲ್ಲಿ ಐದು ಸ್ಥಳಗಳನ್ನು ಹೊರತುಪಡಿಸಿ ಉಳಿದೆಲ್ಲ ಸ್ಥಳಗಳಿಂದ ಇಸ್ರೇಲ್ ತನ್ನ ಸೇನಾ ಪಡೆಗಳನ್ನು ಮಂಗಳವಾರ ಹಿಂತೆಗೆದುಕೊಂಡಿತು. ಅಲ್ಲದೆ, ಸ್ಥಳಾಂತರಗೊಂಡಿದ್ದ ನಿವಾಸಿಗಳಿಗೆ ಗಡಿ ಗ್ರಾಮಗಳಿಗೆ ಮರಳಲು ಅವಕಾಶ ಮಾಡಿಕೊಟ್ಟಿತು.
ಇಸ್ರೇಲ್-ಹಿಜ್ಬುಲ್ಲಾ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಮಂಗಳವಾರ ಬೆಳಿಗ್ಗೆ ವಾಪಸಾತಿ ಗಡುವು ಮುಕ್ತಾಯಗೊಂಡ ನಂತರ, ಕಫ್ರ್ ಕಿಲಾಗೆ ಹಿಂತಿರುಗಿದ ಅಲಾ ಅಲ್-ಝೆನ್ ಎಂಬುವರು, 'ಇಡೀ ಊರು ಕಟ್ಟಡಗಳ ಭಗ್ನಾವಶೇಷಗಳಿಂದ ತುಂಬಿದೆ. ಇದು ವಿಪತ್ತು ವಲಯವಾಗಿ ಮಾರ್ಪಟ್ಟಿದೆ' ಎಂದು ಪ್ರತಿಕ್ರಿಯಿಸಿದರು.
ಕಲ್ಲುಮಣ್ಣುಗಳ ರಾಶಿ ಮತ್ತು ಸೇನೆಯ ನಿರ್ಬಂಧಗಳಿಂದಾಗಿ ನಿವಾಸಿಗಳಿಗೆ ಕಫ್ರ್ ಕಿಲಾವನ್ನು ವಾಹನಗಳಲ್ಲಿ ತಲುಪಲು ಸಾಧ್ಯವಾಗಲಿಲ್ಲ. ತಮ್ಮ ಕಾರುಗಳನ್ನು ಗ್ರಾಮದ ಪ್ರವೇಶದ್ವಾರದಲ್ಲೇ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಮನೆಗಳತ್ತ ತೆರಳಿದರು.
ಗಡಿಯ ಸಮೀಪದ ಐದು ಪ್ರಮುಖ ಸ್ಥಳಗಳಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದ ಇಸ್ರೇಲ್ ಈ ಮೊದಲೇ ಘೋಷಿಸಿತ್ತು. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಮಂಗಳವಾರ ಸೇನೆ ನಿಯೋಜನೆಯನ್ನು ದೃಢಪಡಿಸಿ, ಹಿಜ್ಬುಲ್ಲಾ ಬಂಡುಕೋರರು ಕದನ ವಿರಾಮ ಒಪ್ಪಂದ ಉಲ್ಲಂಘಿಸಿದರೆ ತಿರುಗೇಟು ನೀಡುವುದಾಗಿ ಎಚ್ಚರಿಸಿದರು.