ವಾಷಿಂಗ್ಟನ್: ಅಮೆರಿಕ ಮತ್ತು ಭಾರತದ ಬಾಂಧವ್ಯ ಹೊಸ ಹಂತ ತಲುಪಿದೆ ಎಂಬುದನ್ನು ವಿವರಿಸುವುದಕ್ಕೆ ಹೊಸ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಪದಗಳನ್ನೇ ಟಂಕಿಸಿದ್ದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸಭೆ ಸಾಕ್ಷಿಯಾಯಿತು.
ಸಭೆ ಬಳಿಕ, ಟ್ರಂಪ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ''ಮೇಕ್ ಅಮೆರಿಕ ಗ್ರೇಟ್ ಅಗೇನ್'(ಎಂಎಜಿಎ- 'ಮಗ') ಎಂಬ ಟ್ರಂಪ್ ಮಾತಿನಿಂದ ಪ್ರೇರಿತನಾಗಿ ನಾನು 'ಮೇಕ್ ಇಂಡಿಯಾ ಗ್ರೇಟ್ ಅಗೇನ್'(ಎಂಐಜಿಎ- ಮಿಗ) ಎಂಬ ಪದವನ್ನು ಟಂಕಿಸಿದ್ದೇನೆ.
ಈ ಎರಡು ಮುನ್ನೋಟಗಳನ್ನು ಒಟ್ಟಿಗೆ ಸೇರಿಸಿದಾಗ 'ಸಮೃದ್ಧಿಗಾಗಿ 'ಮೆಗಾ' ಪಾಲುದಾರಿಕೆ' ಎಂದಾಗುತ್ತದೆ. ಇದು ಉಭಯ ದೇಶಗಳ ಸಂಬಂಧ ಹೊಸ ಎತ್ತರಕ್ಕೆ ಏರಿರುವುದನ್ನು ಸೂಚಿಸುತ್ತದೆ' ಎಂದು ಹೇಳಿದರು.
ಇದಕ್ಕೂ ಮುನ್ನ, ಶ್ವೇತಭವನದಲ್ಲಿ ನಡದ ಸಭೆಗೆ ಆಗಮಿಸಿದ ಮೋದಿ ಅವರನ್ನು ಟ್ರಂಪ್ ಆತ್ಮೀಯವಾಗಿ ಬರಮಾಡಿಕೊಂಡರು. ಸುದೀರ್ಘ ಹಸ್ತಲಾಘವ ಮಾಡಿ, ಮೋದಿ ಅವರನ್ನು ಆಲಂಗಿಸಿದ ಟ್ರಂಪ್, 'ಮೋದಿ ನನ್ನ ಅತ್ಯುತ್ತಮ ಸ್ನೇಹಿತ, ದೈತ್ಯಶಕ್ತಿಯ ವ್ಯಕ್ತಿ' ಎಂದರು.
ಇದಕ್ಕೆ ಪ್ರತಿಯಾಗಿ, ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕಾಗಿ ಟ್ರಂಪ್ ಅವರನ್ನು ಮೋದಿ ಅಭಿನಂದಿಸಿದರು.
ಉಡುಗೊರೆ:
'ಮಿಸ್ಟರ್ ಪ್ರೈಮ್ ಮಿನಿಸ್ಟರ್ ಯು ಆರ್ ಗ್ರೇಟ್' ಎಂಬುದಾಗಿ ತಮ್ಮ ಹಸ್ತಾಕ್ಷರವುಳ್ಳ 'ಅವರ್ ಜರ್ನಿ ಟುಗೆದರ್' ಎಂಬ 'ಕಾಫಿ ಟೇಬಲ್ ಪುಸ್ತಕ' ಅನ್ನು ಟ್ರಂಪ್ ಅವರು ಮೋದಿಗೆ ಉಡುಗೊರೆಯಾಗಿ ನೀಡಿದರು. ಟ್ರಂಪ್ ಹಾಗೂ ಮೋದಿ ಅವರ ಸ್ನೇಹ, ಸಭೆಗಳಲ್ಲಿ, ಟ್ರಂಪ್ ದಂಪತಿ ಭಾರತಕ್ಕೆ ನೀಡಿದ್ದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಈ ಪುಸ್ತಕ ಒಳಗೊಂಡಿದೆ.
ಗಮನ ಸೆಳೆದ ಟ್ರಂಪ್ ಮಾತು- ನಡೆ
ಭಾರತಕ್ಕೆ ವಿಧಿಸುವ ಪ್ರತಿ ಸುಂಕ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಕಠಿಣ ನಿಲುವು ತೆಗೆದುಕೊಂಡಿದ್ದರೂ ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಲ್ಲಿ ಅವರು ನಡೆದುಕೊಂಡ ರೀತಿ ಆಡಿದ ಮಾತು ಗಮನ ಸೆಳೆದಿವೆ. 'ಮೋದಿ ನನಗಿಂತ ಹೆಚ್ಚು ಕಠಿಣ ಹಾಗೂ ಅತ್ಯುತ್ತಮ ಸಂಧಾನಕಾರ. ಈ ವಿಷಯದಲ್ಲಿ ನಮ್ಮಿಬ್ಬರ ನಡುವೆ ಸ್ಪರ್ಧೆಯೂ ಇಲ್ಲ' ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 'ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ದೊಡ್ಡ ನಾಯಕ. ಅವರ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಾರೆ' ಎಂದರು.