ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಪ್ರಾರಂಭಿಸಿ ಸೋಮವಾರ ಮೂರು ವರ್ಷ ಕಳೆದಿದೆ. ಈ ವರ್ಷಾಚರಣೆ ಸಂದರ್ಭದಲ್ಲಿ ಉಕ್ರೇನ್‌ಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಕೀವ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಪಾಶ್ಯಾತ್ಯ ದೇಶಗಳ ಮುಖ್ಯಸ್ಥರು ಸಾಕ್ಷಿಯಾದರು.
'ಯುದ್ಧವು ಮತ್ತಷ್ಟು ಕಾಲ ಮುಂದುವರಿದರೆ, ಜಾಗತಿಕ ಭದ್ರತೆಯ ಮೇಲೆ ತೀವ್ರವಾದ ಪರಿಣಾಮ ಬೀರಲಿದೆ' ಎಂದು ಮುಖ್ಯಸ್ಥರು ಎಚ್ಚರಿಕೆ ನೀಡಿದರು. ರಷ್ಯಾ ವಿರುದ್ಧದ ಉಕ್ರೇನ್ ಹೋರಾಟಕ್ಕೆ ಶತಕೋಟಿ ಡಾಲರ್ ನೆರವು ನೀಡಲಾಗುವುದು ಎಂದು ಘೋಷಿಸಿದರು. ಹೋರಾಟಕ್ಕೆ ನೆರವು ನೀಡುವ ವಾಗ್ದಾನವನ್ನು ಅಮೆರಿಕ ಈಗಾಗಲೇ ಹಿಂಪಡೆದಿದ್ದು, ಕಾರ್ಯಕ್ರಮಕ್ಕೆ ಅಧಿಕೃತವಾಗಿ ಯಾವುದೇ ಅಧಿಕಾರಿಯನ್ನು ಕಳುಹಿಸಲಿಲ್ಲ.
'ನೀವು ಅಂತರರಾಷ್ಟ್ರೀಯ ಗಡಿಯನ್ನು ದಾಟಿದರೆ ಅಥವಾ ನೆರೆಯವರ ಮೇಲೆ ಆಕ್ರಮಣ ಮಾಡಿದರೆ ಯಾವುದೇ ಶಿಕ್ಷೆ ವಿಧಿಸುವುದಿಲ್ಲವೇ ಎಂಬುದನ್ನು ಜಗತ್ತಿನಾದ್ಯಂತ ನಿರಂಕುಶಾಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ' ಎಂದು ಐರೋಪ್ಯ ಒಕ್ಕೂಟದ (ಇಯು) ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೆಯೆನ್ ಎಚ್ಚರಿಕೆ ನೀಡಿದ್ದಾರೆ.
'ಇದು ಉಕ್ರೇನ್‌ಗಷ್ಟೇ ಸೀಮಿತವಾದ ವಿಚಾರವಲ್ಲ. ವಿಶ್ವದ ಪ್ರತಿ ದೇಶವನ್ನು ರಕ್ಷಿಸುವ ಸಾರ್ವಭೌಮ, ಸ್ವಾತಂತ್ರ್ಯದ ಮೌಲ್ಯಗಳಿಗೆ ಸಂಬಂಧಿಸಿದ ವಿಚಾರವಾಗಿದೆ' ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತಿಳಿಸಿದ್ದಾರೆ.
ನಿಯೋಗ ಭೇಟಿ: ಲಾಟ್‌ವಿಯಾ ಅಧ್ಯಕ್ಷ ಎಡ್ಗಾರ್ ರಿಂಕೆವಿಕ್ಸ್, ಇಸ್ಟೋನಿಯಾ ಅಧ್ಯಕ್ಷ ಕ್ರಿಸ್ಟೆನ್ ಮೈಕೆಲ್, ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸನ್, ನಾರ್ವೆ ಪ್ರಧಾನಿ ಜೊನಸ್ ಸ್ಟೋರ್, ಸ್ಪೇನ್ ಪ್ರಧಾನಿ ಪೆದ್ರೊ ಸಂಚೆಝ್, ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ಸ್ಟೀಡನ್ ಪ್ರಧಾನಿ ಅಲ್ಫ್ ಕ್ರಿಸ್ಟರ್‌ಸನ್, ಐರೋಪ್ಯ ಒಕ್ಕೂಟದ (ಇಯು) ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೆಯೆನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಐಸ್‌ಲ್ಯಾಂಡ್ ಪ್ರಧಾನಿ ಕ್ರಿಸ್ಟನ್ ಅವರು ಭಾಗಿಯಾದರು.
ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಸಂಭಾವ್ಯ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಯುರೋಪ್‌ನ ಶಾಂತಿಪಾಲಕರು ಉಕ್ರೇನ್‌ಗೆ ಭೇಟಿ ನೀಡಿದರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅದನ್ನು ಒಪ್ಪಿಕೊಳ್ಳಲಿದ್ದಾರೆ' ಎಂದು ತಿಳಿಸಿದ್ದರು. 'ಯುದ್ಧ ಕೊನೆಗೊಳಿಸುವ ಮಾತುಕತೆಯಲ್ಲಿ ಯುರೋಪಿಯನ್ ದೇಶಗಳು ಭಾಗಿಯಾಗಬೇಕು. ಈ ಬಗ್ಗೆ ಟ್ರಂಪ್ ಜೊತೆಗೆ ಅಧಿಕೃತವಾಗಿ ಯಾವುದೇ ಚರ್ಚೆ ನಡೆಸಿಲ್ಲ' ಎಂದು ಇದಕ್ಕೆ ಪುಟಿನ್ ಪ್ರತಿಕ್ರಿಯಿಸಿದ್ದರು.
ಉಕ್ರೇನ್ ಯುದ್ಧ ಸ್ಥಗಿತ: ಅಮೆರಿಕ ನಿರ್ಣಯ ಅಂಗೀಕಾರ ವಿಶ್ವಸಂಸ್ಥೆ (ಎಪಿ): ಉಕ್ರೇನ್ ಮೇಲಿನ ಯುದ್ಧವನ್ನು ಶೀಘ್ರ ಕೊನೆಗೊಳಿಸಬೇಕೆಂಬ ಅಮೆರಿಕ ನಿರ್ಣಯವನ್ನು ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಅಂಗೀಕರಿಸಲಾಯಿತು. ಆದರೆ ರಷ್ಯಾ ನಡೆಸಿದ ದಾಳಿಯನ್ನು ನಿರ್ಣಯದಲ್ಲಿ ಉಲ್ಲೇಖಿಸಿಲ್ಲ. 15 ಸದಸ್ಯತ್ವದ ಕೌನ್ಸಿಲ್‌ನಲ್ಲಿ 10-0 ಮತದ ಮೂಲಕ ನಿರ್ಣಯಕ್ಕೆ ಅಂಗೀಕಾರ ಪಡೆಯಲಾಯಿತು. ಐದು ರಾಷ್ಟ್ರಗಳು ಮತದಾನದಿಂದ ಹೊರಗುಳಿದವು.