ಬೆಂಗಳೂರು: ಕರ್ನಾಟಕದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 11 ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಶನಿವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಚಿವರು, ಪ್ರಮುಖ ಕ್ಷೇತ್ರಗಳಲ್ಲಿ ರೂ. 10 ಲಕ್ಷ ಕೋಟಿ ಮೊತ್ತದ ಹೂಡಿಕೆಯನ್ನು ರಾಜ್ಯ ನಿರೀಕ್ಷಿಸಿದೆ. ಫೆಬ್ರವರಿ 11 ರಂದು ಸಂಜೆ 4 ಗಂಟೆಗೆ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ ಸಿಗಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಿತರರು ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಫೋರ್ಟಲ್ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕೇಂದ್ರದ ಎಲ್ಲಾ ಸಚಿವರನ್ನು ಆಹ್ವಾನಿಸಿದ್ದೇವೆ. ಅವರಲ್ಲಿ ರಾಜನಾಥ್ ಸಿಂಗ್, ಪ್ರಲ್ಹಾದ್ ಜೋಶಿ, ಹೆಚ್. ಡಿ. ಕುಮಾರಸ್ವಾಮಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ. ರಾಜ್ಯದ ಕೈಗಾರಿಕಾ ಬೆಳವಣಿಗೆಯನ್ನು ರೂಪಿಸಿದ 14 ಮುಂಚೂಣಿ ಕೈಗಾರಿಕೆಗಳನ್ನು ಗುರುತಿಸಿ ಮೊಟ್ಟಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಫೆ. 13ರವರೆಗೆ ನಡೆಯಲಿರುವ ಸಮಾವೇಶದಲ್ಲಿ ಉದ್ಯಮಿಗಳಾದ ಆನಂದ್ ಮಹೀಂದ್ರಾ, ಕುಮಾರ್ ಮಂಗಳಂ ಬಿರ್ಲಾ, ಶಶಿ ತರೂರ್, ಕಿರಣ್ ಮಂಜೂದ್ಹಾರ್ ಶಾ, ಮಾರ್ಟಿನ್ ಲುಂಡ್‌ಸ್ಟೆಡ್, ಜಾರ್ಜ್ ಪಾಪಂಡ್ರೂ, ಆನ್ ಡಂಕಿನ್, ಓಡೆ ಅಬ್ಬೋಷ್, ನಿರ್ದೇಶಕ ಕಿರಣ್ ರಾವ್ ಸೇರಿದಂತೆ ಅನೇಕ ಮಂದಿ ಮಾತನಾಡಲಿದ್ದಾರೆ. 18 ದೇಶಗಳ ಸಹಕಾರ ಮತ್ತು 9 ದೇಶಗಳ ಫೆವಿಲಿಯನ್ ನೊಂದಿಗೆ ನಡೆಯುವ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ನಿರ್ಣಾಯಕ ತಂತ್ರಜ್ಞಾನ ಮತ್ತು ನಾವೀನ್ಯತೆ ವಿನಿಮಯವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದ್ದಾರೆ.