ನವದೆಹಲಿ: ಕೋವಿಡ್-19 ತಡೆಯಲು ನೀಡಲಾದ ಲಸಿಕೆಗಳಿಂದ ಅಡ್ಡ ಪರಿಣಾಮಗಳು ಉಂಟಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ನೀತಿಯೊಂದನ್ನು ರೂಪಿಸುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಲಸಿಕೆಯಿಂದಾಗಿ ಮರಣ ಸೇರಿದಂತೆ ಇತರ ಅಡ್ಡ ಪರಿಣಾಮಗಳು ಉಂಟಾದಲ್ಲಿ ಅದಕ್ಕೆ ಪರಿಹಾರ ನೀಡಲು ಯಾವುದೇ ನೀತಿಯನ್ನು ರೂಪಿಸಿಲ್ಲ ಎಂಬುದನ್ನು ಕೋರ್ಟ್‌ನ ಗಮನಕ್ಕೆ ತರಲಾಯಿತು.
ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ, ಕೋವಿಡ್ ಲಸಿಕೆ ನೀಡಿದ ನಂತರದ ಪರಿಣಾಮಗಳನ್ನು ನಿರ್ವಹಿಸಲು ಯಾವುದೇ ಉಲ್ಲೇಖವಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರು ಇದ್ದ ವಿಭಾಗೀಯ ಪೀಠಕ್ಕೆ ತಿಳಿಸಿದರು.
'ಕೋವಿಡ್ ಸಾಂಕ್ರಾಮಿಕವನ್ನು ವಿಪತ್ತು ಎಂದು ಘೋಷಿಸಲಾಗಿತ್ತು. ಆದರೆ ಲಸಿಕೆ ನೀಡುವ ಅಭಿಯಾನವನ್ನು ವೈದ್ಯಕೀಯ ಶಿಷ್ಟಾಚಾರಗಳಿಗೆ ಅನುಗುಣವಾಗಿ ನಡೆಸಲಾಗಿದೆ' ಎಂದು ಅವರು ಹೇಳಿದರು.