ಹೈದರಾಬಾದ್: 'ಎಸ್‌ಎಲ್‌ಬಿಸಿ ಸುರಂಗದಲ್ಲಿ ಸಿಲುಕಿರುವ 8 ಮಂದಿ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣವಾಗಿದ್ದು, ಅವರನ್ನು ತಲುಪಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ' ಎಂದು ತೆಲಂಗಾಣ ಸಚಿವ ಜುಪಲ್ಲಿ ಕೃಷ್ಣ ರಾವ್ ಹೇಳಿದ್ದಾರೆ.
'ನಿಜ ಹೇಳಬೇಕೆಂದರೆ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ತುಂಬಾ ಕಡಿಮೆಯಿದೆ.
30 ಅಡಿ ಆಳದ ಸುರಂಗದಲ್ಲಿ ಸುಮಾರು 25 ಅಡಿ ಮಣ್ಣು ರಾಶಿಯಿಂದ ತುಂಬಿದೆ. ಸುರಂಗದ ಹೊರಗಿನಿಂದ ನಿಂತು ಅವರ ಹೆಸರನ್ನು ಕೂಗಿದ್ದು, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದು ಸುದ್ದಿಸಂಸ್ಥೆ ಪಿಟಿಐಗೆ ಅವರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಕೆಸರು, ಮಣ್ಣು ತುಂಬಿದ್ದರಿಂದ ಸಿಲುಕಿದವರನ್ನು ರಕ್ಷಿಸಲು ಕನಿಷ್ಠ ಮೂರ್ನಾಲ್ಕು ದಿನಗಳಾದರು ಬೇಕಾಗಬಹುದು ಎಂದೂ ಅವರು ಹೇಳಿದ್ದಾರೆ.
'2023ರಲ್ಲಿ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಿದ ರ್‍ಯಾಟ್ ಮೈನರ್ಸ್ ತಂಡದವರೂ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ತಂಡದವರೊಂದಿಗೆ ಕೈಜೋಡಿಸಿದ್ದಾರೆ' ಎಂದು ತಿಳಿಸಿದ್ದಾರೆ.
ಹೈದರಾಬಾದ್‌ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಶ್ರೀಶೈಲಂ ಎಡದಂಡೆ ಕಾಲುವೆ(ಎಸ್‌ಎಲ್‌ಬಿಸಿ) ಯೋಜನೆಯ ಸುರಂಗದ ಒಂದು ಭಾಗ ಕುಸಿದು ಎಂಟು (ಇಬ್ಬರು ಎಂಜಿನಿಯರ್, ಇಬ್ಬರು ಆಪರೇಟರ್ಸ್ ಮತ್ತು ನಾಲ್ಕು ಮಂದಿ ಕಾರ್ಮಿಕರು) ಕಾರ್ಮಿಕರು ಅದರಲ್ಲಿ ಸಿಲುಕಿಕೊಂಡಿದ್ದಾರೆ.
ಸುರಂಗದಲ್ಲಿ ಸಿಲುಕಿದವರನ್ನು ಉತ್ತರ ಪ್ರದೇಶದ ಮನೋಜ್ ಕುಮಾರ್, ಜಮ್ಮು ಮತ್ತು ಕಾಶ್ಮೀರದ ಶ್ರೀನಿವಾಸ್ ಮತ್ತು ಸನ್ನಿ ಸಿಂಗ್, ಪಂಜಾಬ್‌ನ ಗುರುಪ್ರೀತ್ ಸಿಂಗ್, ಜಾರ್ಖಂಡ್‌ನ ಸಂದೀಪ್ ಸಾಹು, ಜೆಗ್ತಾ ಕ್ಸೆಸ್, ಸಂತೋಷ್ ಸಾಹು ಮತ್ತು ಅನುಜ್ ಸಾಹು ಎಂದು ಗುರುತಿಸಲಾಗಿದೆ.