ನವದೆಹಲಿ: ರಾಜಕೀಯದ ಅಪರಾಧೀಕರಣವು ಬಹಳ ಗಂಭೀರವಾದ ವಿಚಾರ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕ್ರಿಮಿನಲ್ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತನಾದ ವ್ಯಕ್ತಿಯು ಸಂಸತ್ತಿಗೆ ಮರಳುವುದು ಹೇಗೆ ಸರಿ ಎಂದು ಪ್ರಶ್ನಿಸಿದೆ.
ಈ ವಿಚಾರದಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ನೆರವು ಬೇಕು ಎಂದು ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ಮನಮೋಹನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ವಕೀಲರಾದ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ಪೀಠವು ನಡೆಸಿತು. ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 ಮತ್ತು 9ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗವು ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಪೀಠ ಸೂಚಿಸಿದೆ.
'ವ್ಯಕ್ತಿಯು ಅಪರಾಧಿ ಎಂದು ಘೋಷಣೆಯಾಗಿ, ಆ ಘೋಷಣೆಯನ್ನು ಮೇಲಿನ ಹಂತದ ನ್ಯಾಯಾಲಯವು ಪುರಸ್ಕರಿಸಿದ ನಂತರ ಅಂತಹ ವ್ಯಕ್ತಿ ಸಂಸತ್ತಿಗೆ ಅಥವಾ ವಿಧಾನಸಭೆಗೆ ಮರಳುವುದು ಹೇಗೆ ಸರಿ? ಇದಕ್ಕೆ ಅವರು ಉತ್ತರ ನೀಡಬೇಕು. ಇಲ್ಲಿ ಹಿತಾಸಕ್ತಿಗಳ ಸಂಘರ್ಷವೂ ಇರುವಂತೆ ಕಾಣುತ್ತಿದೆ. ಶಾಸನಗಳನ್ನು ಅವರೇ ಪರಿಶೀಲನೆಗೆ ಒಳಪಡಿಸುತ್ತಿರುತ್ತಾರೆ...' ಎಂದು ಪೀಠ ಹೇಳಿತು.
'ಕಾಯ್ದೆಯ ಸೆಕ್ಷನ್ 8 ಹಾಗೂ 9ರ ಬಗ್ಗೆ ನಮಗೆ ಇನ್ನಷ್ಟು ಮಾಹಿತಿ ಬೇಕು. ಭ್ರಷ್ಟಾಚಾರದ ಅಪರಾಧ ಎಸಗಿದವನನ್ನು ಸರ್ಕಾರಿ ಸೇವೆಗೆ ಅನರ್ಹ ಎಂದು ಪರಿಗಣಿಸಲಾಗುತ್ತದೆ. ಆದರೆ ಆ ವ್ಯಕ್ತಿ ಸಚಿವನಾಗಬಹುದು' ಎಂದು ಪೀಠವು ಹೇಳಿತು.
ಶಾಸಕರು, ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ, ಇತ್ಯರ್ಥಪಡಿಸಬೇಕು ಎಂಬ ಕೋರಿಕೆಯು ಅರ್ಜಿಯಲ್ಲಿದೆ. ಈ ವಿಷಯದ ಬಗ್ಗೆ ತ್ರಿಸದಸ್ಯ ಪೀಠವು ಈಗಾಗಲೇ ತೀರ್ಪು ನೀಡಿರುವ ಕಾರಣ, ಅದನ್ನು ವಿಸ್ತೃತ ಪೀಠದ ಪರಿಶೀಲನೆಗೆ ಒಪ್ಪಿಸುವ ಸಾಧ್ಯತೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಿಜೆಐ ಅವರಿಗೆ ರವಾನಿಸಲು ವಿಭಾಗೀಯ ಪೀಠ ಸೂಚಿಸಿತು.
ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ಸೂಚನೆ ನೀಡಿದ್ದರೂ, ಹೈಕೋರ್ಟ್‌ಗಳು ಮೇಲ್ವಿಚಾರಣೆ ನಡೆಸುತ್ತಿದ್ದರೂ ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿ ಬಾಕಿ ಇವೆ ಎಂದು ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ ಹೇಳಿದರು.
ಕ್ರಿಮಿನಲ್ ಅಪರಾಧ ಸಾಬೀತಾದ ವ್ಯಕ್ತಿಯು ಚುನಾವಣೆಗಳಿಗೆ ಆರು ವರ್ಷ ಸ್ಪರ್ಧಿಸಬಾರದು ಎಂದು ಸೆಕ್ಷನ್ 8 ಹೇಳುತ್ತದೆ. ಈ ಅಂಶವನ್ನು ಪಿಐಎಲ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ಹನ್ಸಾರಿಯಾ ತಿಳಿಸಿದರು.