ಖಾನ್ ಯೂನಿಸ್: ಇಸ್ರೇಲ್‌ನ ನಾಲ್ವರು ಒತ್ತೆಯಾಳುಗಳ ಮೃತದೇಹಗಳನ್ನು ಹಮಾಸ್ ಗುರುವಾರ ಹಸ್ತಾಂತರ ಮಾಡಿದೆ. ವೈಮಾನಿಕ ದಾಳಿಯಲ್ಲಿ ಈ ನಾಲ್ವರು ಮೃತಪಟ್ಟಿದ್ದರು ಎಂದು ಹಮಾಸ್ ಹೇಳಿದೆ.
ಒಬ್ಬ ಮಹಿಳೆ, ಆಕೆಯ ಇಬ್ಬರು ಚಿಕ್ಕ ಮಕ್ಕಳು ಹಾಗೂ ಮತ್ತೊಬ್ಬ ವ್ಯಕ್ತಿಯ ಮೃತದೇಹಗಳನ್ನು ಹಮಾಸ್ ಹಸ್ತಾಂತರಿಸಿದೆ.
ಹಮಾಸ್‌ನಿಂದ ಅಪಹರಣಕ್ಕೆ ಒಳಗಾದವರಲ್ಲಿ 9 ತಿಂಗಳ ಮಗು ಸೇರಿದ್ದು, ಅತಿ ಕಿರಿಯ ಒತ್ತೆಯಾಳು ಆಗಿತ್ತು.
ದಕ್ಷಿಣ ಗಾಜಾಪಟ್ಟಿಯ ಖಾನ್ ಯೂನಿಸ್ ಪ್ರದೇಶದಲ್ಲಿ ಮೃತದೇಹಗಳನ್ನು ರೆಡ್ ಕ್ರಾಸ್‌ಗೆ ಹಸ್ತಾಂತರಿಸಲಾಯಿತು. ಈ ವೇಳೆ ಹಮಾಸ್‌ನ ಬಂಡುಕೋರರು ಸೇರಿದಂತೆ ಸಾವಿರಾರು ಜನರು ಸೇರಿದ್ದರು. ಹಲವರು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರಾಕ್ಷಸ ಎಂದು ಚಿತ್ರಿಸಿದ್ದ ಬ್ಯಾನರ್‌ಗಳನ್ನು ಪ್ರದರ್ಶಿಸಿದರು.
ಆರು ಮಂದಿ ಜೀವಂತ ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಸಜ್ಜಾಗಿದೆ. ಮುಂದಿನ ವಾರದಲ್ಲಿ ಇಸ್ರೇಲ್‌ನ ಇನ್ನೂ ನಾಲ್ವರ ಮೃತ ದೇಹಗಳನ್ನು ಹಸ್ತಾಂತರಿಸುವ ಮೂಲಕ ಕದನ ವಿರಾಮ ಒಪ್ಪಂದದ ಮೊದಲ ಹಂತವನ್ನು ಪೂರ್ಣಗೊಳಿಸಲಾಗುವುದು ಎಂದು ಹಮಾಸ್ ಹೇಳಿದೆ.
ಶಾಶ್ವತ ಕದನ ವಿರಾಮ ಘೋಷಣೆ ಮಾಡುವವರೆಗೆ ಹಾಗೂ ಪ್ಯಾಲೆಸ್ಟೀನ್‌ನಲ್ಲಿರುವ ಇಸ್ರೇಲ್ ಸೇನೆಯು ಹಿಂದಿರುಗುವವರೆಗೂ ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದೂ ಹಮಾಸ್ ಹೇಳಿದೆ.
ಕದನ ವಿರಾಮ ಘೋಷಿಸಿದ ಬಳಿಕ ಇಸ್ರೇಲ್‌ನ 24 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿತ್ತು. ಇಸ್ರೇಲ್ ಸಹ ಪ್ಯಾಲೆಸ್ಟೀನ್‌ನ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿದೆ.
ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಬಂಡುಕೋರರು ಸುಮಾರು 30 ಮಕ್ಕಳು ಸೇರಿದಂತೆ 251 ಜನರನ್ನು ಅಪಹರಿಸಿದ್ದರು ಮತ್ತು 1,200ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿದ್ದರು.