ಅಯೋಧ್ಯೆ: ಡ್ರೋನ್ ನಿಗ್ರಹ ಕಾರ್ಯಾಚರಣೆಯ ಪ್ರಯೋಗದ ವೇಳೆ ಇಲ್ಲಿನ ರಾಮ ಮಂದಿರ ಮಾರ್ಗದಲ್ಲಿ ಹಾರುತ್ತಿದ್ದ ಕ್ಯಾಮೆರಾ ಅಳವಡಿಸಿದ್ದ ಡ್ರೋನ್ ಅನ್ನು ಪೊಲೀಸರು ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಬಾಂಬ್ ನಿಷ್ಕ್ರಿಯ ದಳವು ಡ್ರೋನ್ ಕ್ಯಾಮೆರಾವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಖಚಿತಪಡಿಸಿದೆ. ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಯೋಧ್ಯೆಯಲ್ಲಿ ಅಧಿಕಾರಿಗಳು ಡ್ರೋನ್ ವಿರೋಧಿ ಭದ್ರತಾ ಕಾರ್ಯಾಚರಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ್ದಾರೆ. ರಾಮಮಂದಿರದ ಮೇಲೆ ಡ್ರೋನ್ ಹಾರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
'ಈ ವ್ಯವಸ್ಥೆಯು 2.5 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಡ್ರೋನ್ ಅನ್ನು ಪತ್ತೆ ಮಾಡಿ ಹೊಡೆದುರುಳಿಸುತ್ತೆ. ಪ್ರಾಯೋಗಿಕ ಕಾರ್ಯಾಚರಣೆ ವೇಳೆ ರಾಮನ ದೇವಾಲಯದ ಮಾರ್ಗದಲ್ಲಿ ಹೋಗುತ್ತಿದ್ದ ಕ್ಯಾಮೆರಾ ಇದ್ದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ'ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಾಮಮಂದಿರದ ಸುತ್ತಲೂ ಗುಪ್ತಚರ ಸಂಸ್ಥೆ ಭಾರಿ ಕಟ್ಟೆಚ್ಚರ ವಹಿಸಿವೆ.
ಡ್ರೋನ್ ಆಪರೇಟರ್ ಅನ್ನು ಪೊಲೀಸರು ಪತ್ತೆ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಿಗೆ ವಿಡಿಯೊ ಅಪ್ಲೋಡ್ ಮಾಡಲು ಆತ ಚಿತ್ರೀಕರಣ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈ ವರ್ಷದ ಆರಂಭದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಬಾಲರಾಮನ ವಿಗ್ರಹದ ಪ್ರತಿಷ್ಠಾಪನೆಯ ಸಮಯದಲ್ಲಿ ಉತ್ತರ ಪ್ರದೇಶ ಪೊಲೀಸರು ಮೊದಲ ಬಾರಿಗೆ ಅತ್ಯಾಧುನಿಕ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಬಳಸಿದ್ದರು ಎಂದು ಲಖನೌದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ವೈಮಾನಿಕ ರಕ್ಷಣೆಗಾಗಿ ಅದೇ ಡ್ರೋನ್ ನಿಗ್ರಹ ತಂತ್ರಜ್ಞಾನವನ್ನು ಬಳಸಲಾಗಿದೆ. ದೇಶದಲ್ಲಿ ಗುಜರಾತ್‌ನಂತಹ ಕೆಲವು ರಾಜ್ಯಗಳು ಮಾತ್ರ ಇದನ್ನು ಇಲ್ಲಿಯವರೆಗೆ ಬಳಸಿಕೊಂಡಿವೆ ಎಂದು ಅಧಿಕಾರಿ ಹೇಳಿದ್ದಾರೆ.