ನವದೆಹಲಿ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭ ಮೇಳವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಕತೆಯ ಮಹಾ ಯಜ್ಞ ಎಂದು ಬಣ್ಣಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಏಕತೆಯ ಮಹಾಕುಂಭವನ್ನು ಯಶಸ್ವಿಗೊಳಿಸಲು ದೇಶವಾಸಿಗಳ ಕಠಿಣ ಪರಿಶ್ರಮ, ಪ್ರಯತ್ನಗಳು ಮತ್ತು ದೃಢಸಂಕಲ್ಪದಿಂದ ಪ್ರಭಾವಿತನಾಗಿದ್ದೇನೆ. ಹೀಗಾಗಿ, 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯ ಜ್ಯೋತಿರ್ಲಿಂಗವಾದ ಶ್ರೀ ಸೋಮನಾಥನ ದರ್ಶನಕ್ಕೆ ಹೋಗುತ್ತೇನೆ. ಭಕ್ತಿಯ ಸಂಕೇತವಾಗಿ ಸಂಕಲ್ಪ ಪುಷ್ಪವನ್ನು ಅರ್ಪಿಸುವ ಮೂಲಕ ಪ್ರತಿಯೊಬ್ಬ ಭಾರತೀಯನಿಗಾಗಿ ಪ್ರಾರ್ಥಿಸುತ್ತೇನೆ. ದೇಶವಾಸಿಗಳಲ್ಲಿ ಈ ಏಕತೆಯು ನಿರಂತರವಾಗಿ ಇರಲಿ ಎಂದು ನಾನು ಬಯಸುತ್ತೇನೆಂದು ಹೇಳಿದ್ದಾರೆ.
ಈ ಮಹಾ ಕುಂಭಮೇಳದಲ್ಲಿ ಸಮಾಜದ ಪ್ರತಿಯೊಂದು ಸ್ಥರದ ಮತ್ತು ಪ್ರತಿಯೊಂದು ಕ್ಷೇತ್ರದ ಜನರು ಒಟ್ಟುಗೂಡಿದರು. ‘ಏಕ ಭಾರತ ಶ್ರೇಷ್ಠ ಭಾರತ’ದ ಈ ಅವಿಸ್ಮರಣೀಯ ದೃಶ್ಯವು ಕೋಟ್ಯಂತರ ದೇಶವಾಸಿಗಳಲ್ಲಿ ಆತ್ಮವಿಶ್ವಾಸದ ಮಹಾ ಹಬ್ಬವಾಯಿತು. ಮಹಾ ಕುಂಭಮೇಳ ಪೂರ್ಣಗೊಂಡಿತು. ಏಕತೆಯ ಮಹಾ ಯಜ್ಞ ಪೂರ್ಣಗೊಂಡಿದೆ. ಪ್ರಯಾಗರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಏಕತೆಯ ಮಹಾಕುಂಭದಲ್ಲಿ 140 ಕೋಟಿ ಭಾರತೀಯರು ಒಂದೇ ಬಾರಿಗೆ ಒಟ್ಟುಗೂಡಿದ ನಂಬಿಕೆ ಅದ್ಭುತವಾಗಿದೆ. ಮಹಾ ಕುಂಭ ಮುಗಿದ ನಂತರ ನನ್ನ ಮನಸ್ಸಿಗೆ ಬಂದ ಆಲೋಚನೆಗಳನ್ನು ಬರೆಯಲು ಪ್ರಯತ್ನಿಸಿದ್ದೇನೆಂದು ತಿಳಿಸಿದ್ದಾರೆ.
ಇದೇ ವೇಳೆ ಮಹಾಕುಂಭಮೇಳದ ವೇಳೆ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲತೆಗಳಾಗಿದ್ದರೆ ಕ್ಷಮಿಸುವಂತೆ ತಿಳಿಸಿದ್ದಾರೆ.