ಜೆರುಸಲೇಂ: ಇಸ್ರೇಲ್ ಮೂಲಕ ಏಷ್ಯಾ- ಯುರೋಪ್ ಖಂಡಗಳನ್ನು ಅಮೆರಿಕದ ಜೊತೆ ಸಂಪರ್ಕ ಕಲ್ಪಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೂರದೃಷ್ಟಿ ಯೋಜನೆ ಕುರಿತಂತೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಇಸ್ರೇಲ್‌ನ ವಿದೇಶಾಂಗ ಸಚಿವ ಗಿಡಿಯನ್ ಝಾರ್ ಮಾತುಕತೆ ನಡೆಸಿದರು.
ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ಭದ್ರತಾ ಶೃಂಗಸಭೆಗೂ ಮುನ್ನ ಉಭಯ ನಾಯಕರು ಭದ್ರತೆ ಹಾಗೂ ರಾಜತಾಂತ್ರಿಕ ವಿಚಾರಗಳ ಕುರಿತು ಚರ್ಚಿಸಿದರು.
'ಗಿಡಿಯಾನ್ ಝಾರ್ ಜೊತೆಗೆ ಭೇಟಿ ಅದ್ಭುತವಾಗಿತ್ತು. ಪಶ್ಚಿಮ ಏಷ್ಯಾ ಹಾಗೂ ಮಧ್ಯಪ್ರಾಚ್ಯದ ಪ್ರಸಕ್ತ ಸ್ಥಿತಿಗತಿ ಕುರಿತಂತೆ ಚರ್ಚೆ ನಡೆಸಿದೆವು. ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿಯೂ ಚರ್ಚೆ ನಡೆಸಲಾಯಿತು' ಎಂದು ಜೈಶಂಕರ್ ಅವರು 'ಎಕ್ಸ್' ಮೂಲಕ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗುರುವಾರ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಇತಿಹಾಸದ ಶ್ರೇಷ್ಠ ವ್ಯಾಪಾರ ಮಾರ್ಗದ ಕುರಿತು ಉಭಯ ರಾಷ್ಟ್ರಗಳು ಜತೆಯಾಗಿ ಕೆಲಸ ಮಾಡಲು ನಿರ್ಧರಿಸಿದೆ. ಭಾರತದ ಮೂಲಕ ಇಸ್ರೇಲ್, ಇಟಲಿ ಮೂಲಕ ಅಮೆರಿಕವನ್ನು ಸಂಪರ್ಕಿಸುವ ಯೋಜನೆ ಇದಾಗಿದೆ. ಉಭಯ ರಾಷ್ಟ್ರಗಳ ನಡುವೆ ಬಂದರು, ರೈಲ್ವೆ, ಸಾಗರದೊಳಗಿನ ಕೇಬಲ್ ಮೂಲಕ ಸಂಪರ್ಕಿಸುವ ಬಹುದೊಡ್ಡ ಯೋಜನೆ ಇದಾಗಿದೆ' ಎಂದು ಘೋಷಿಸಿದ್ದರು.