ಸಂಭಲ್: ಸಂಭಲ್ ಹಿಂಸಾಚಾರದ ಕುರಿತು ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ನ್ಯಾಯಾಂಗ ಆಯೋಗದ ಸದಸ್ಯರು ಇಂದು (ಶುಕ್ರವಾರ) ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೇವೇಂದ್ರ ಅರೋರಾ, ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಮೋಹನ್ ಪ್ರಸಾದ್, ನಿವೃತ್ತ ಡಿಜಿಪಿ ಅರವಿಂದ ಕುಮಾರ್ ಜೈನ್ ಅವರನ್ನು ಒಳಗೊಂಡ ಆಯೋಗವು ಚಂದೌಸಿ ರಸ್ತೆಯಲ್ಲಿರುವ ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಆಯೋಗವು ಈ ಹಿಂದೆ ಡಿಸೆಂಬರ್ 1, ಜನವರಿ 21 ಮತ್ತು 30 ರಂದು ಸಂಭಲ್‌ಗೆ ಭೇಟಿ ನೀಡಿತ್ತು ಕೊನೆಯ ಭೇಟಿಯ ಸಮಯದಲ್ಲಿ, ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು.
ಘಟನೆಯ ಹಿನ್ನೆಲೆ:
ಸಂಭಲ್‌ನ ಶಾಹಿ ಜಾಮಾ ಮಸೀದಿಯಿದ್ದ ಜಾಗದಲ್ಲಿ ಪುರಾತನ ಹಿಂದೂ ದೇವಾಲಯವಿತ್ತು. ಮೊಘಲ್ ದೊರೆ ಬಾಬರ್ ಆಳ್ವಿಕೆ ಅವಧಿಯಲ್ಲಿ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ದೇಗುಲಕ್ಕೆ ಸೇರಿದ ಅನೇಕ ಗುರುತುಗಳೂ ಅಲ್ಲಿವೆ ಎಂದು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರು ಸ್ಥಳೀಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವಿಡಿಯೊ ಚಿತ್ರೀಕರಣ ಮತ್ತು ಛಾಯಾಗ್ರಹಣ ಸಮೇತ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶಿಸಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ನವೆಂಬರ್ 24ರಂದು ಸಮೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿ, ಮಸೀದಿಯ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದರು. ಬಳಿಕ ಘರ್ಷಣೆ ಹಿಂಸಾರೂಪ ಪಡೆದಿತ್ತು. ಘಟನೆಯಲ್ಲಿ ನಾಲ್ವರು ಸಾವಿಗೀಡಾಗಿ ಹಲವರು ಗಾಯಗೊಂಡಿದ್ದರು.
ಹಿಂಸಾಚಾರ ಕುರಿತು ತನಿಖೆಗಾಗಿ ಮೂವರು ಸದಸ್ಯರು ಇರುವ ನ್ಯಾಯಾಂಗ ಆಯೋಗ ರಚಿಸಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ನ.28ರಂದು ಆದೇಶಿಸಿದ್ದರು.